

ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಆಗಿ ಹುಣ್ಣಿಮೆ ನಿಮಿತ್ತ ಗುರುವಾರ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಹಾಗೂ ಗಂಗಿಮಾಳಮ್ಮ ದೇವಿ ಕಲ್ಯಾಣೋತ್ಸವ ಮತ್ತು ಸ್ವಾಮಿ ರಥೋತ್ಸವ ಸಂಭ್ರಮದಿಂದ ಜರುಗಿತು.
ಸ್ವಾಮಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರು ಮತ್ತು ನವವಿವಾಹಿತರು ಸ್ವಾಮಿ ದರ್ಶನ ಪಡೆದರು. ದೇವಸ್ಥಾನದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ವರ ಹಾಗೂ ದೇವಿಯನ್ನು ವಧು ವೇಷದಲ್ಲಿ ಸಿಂಗರಿಸಿ ಕಲ್ಯಾಣೋತ್ಸವ ನೆರವೇರಿಸಲಾಯಿತು.
ಅನೇಕ ಬಗೆಯ ಧಾನ್ಯಗಳನ್ನು ಮೊಳಕೆಯೊಡೆಯುವಂತೆ ಇರಿಸಲಾಗಿತ್ತು. ಇಲ್ಲಿ ಮೊಳಕೆಯೊಡೆದ ಧಾನ್ಯಗಳ ಭವಿಷ್ಯದಿಂದ ರೈತರು ಹೊಲಗಳಲ್ಲಿ ಬಿತ್ತುವ ಬೆಳೆ ಚೆನ್ನಾಗಿ ಬೆಳೆಯಲಿ ಎಂದು ಪ್ರಾರ್ಥಿಸಿದರು.
ದೇವಸ್ಥಾನ ಧರ್ಮಕರ್ತ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ದೇವಸ್ಥಾನದ ಪ್ರಮೋದ ಭಟ್ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗುರುವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.