

ಶೃಂಗೇರಿ: ಈಶ್ವರಗಿರಿ ಶ್ರೀ ಮಲಹಾನಿಕರೇಶ್ವರ ಸ್ವಾಮಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ಲಕ್ಷ ಮಲ್ಲಿಕಾರ್ಚನೆ, ಜಗದ್ಗುರುಗಳ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿತು.
ಮಹಾಮಂಗಳಾರತಿ ಬಳಿಕ ಯತಿಗಳು ರಥೋತ್ಸವಕ್ಕೆ ಚಿತ್ತೈಸಬೇಕಾಗಿ ಋತ್ವಿಜರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಉತ್ಸವಮೂರ್ತಿಯನ್ನು ಮೆರವಣಿಗೆ ಮೂಲಕ ಮಹಾರಥದಲ್ಲಿ ಕುಳ್ಳಿರಿಸಲಾಯಿತು. ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಿದ ರಥೋತ್ಸವದಲ್ಲಿ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಭಾಗಿಯಾದರು.
ಮುಖ್ಯಬೀದಿಯಲ್ಲಿ ಸ್ವಲ್ಪ ದೂರ ಸಾಗಿ ಬಂದ ರಥೋತ್ಸವಕ್ಕೆ ರಂಗವಲ್ಲಿಗಳು, ವೇದ, ವಾದ್ಯಘೋಷಗಳು, ಮಠದ ಆನೆಗಳು, ಅಶ್ವಗಳು, ಛತ್ರಿ, ಚಾಮರಗಳು ಮೆರುಗು ನೀಡಿದವು. ಮುಖ್ಯಬೀದಿಯಲ್ಲಿ ಸ್ವಲ್ಪ ದೂರ ಸಾಗಿ ಬಂದ ರಥವನ್ನು ಪುನಃ ಮಠದ ರಾಜಗೋಪುರ ತನಕ ಎಳೆದು ತರಲಾಯಿತು. ಸಂಜೆ ಮತ್ತೆ ರಥೋತ್ಸವ ಪಟ್ಟಣದ ಭಾರತೀಚೌಕದ ತನಕ ಸಾಗಿ ಬಂದಿತು. ತಾಲೂಕಿನ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.
ಮಾ.11ರ ಬೆಳಗ್ಗೆ ಓಕುಳಿ ಉತ್ಸವ, ತುಂಗಾ ನದಿಯಲ್ಲಿ ಅವಭೃಥ ಸ್ನಾನ, ಮಹಾರುದ್ರಯಾಗದ ಪೂರ್ಣಾಹುತಿ, ಸಂಜೆ 6ಕ್ಕೆ ಶಾರದಾಂಬಾ ದೇವಾಲಯದಲ್ಲಿ ಸಂಧಾನೋತ್ಸವ, ತೆಪ್ಪೋತ್ಸವ, ಧ್ವಜಾರೋಹಣ ಮುಂತಾದ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.