ಶ್ರೀ ಮೈಲಾರಲಿಂಗೇಶ್ವರ ಜಾತ್ರೆಗೆ ಸಿದ್ಧತೆ ಜೋರು, ಫೆ.11ರಂದು ಕಾರ್ಣಿಕ ಕುಡಿವ ನೀರು ಸೇರಿ ಮೂಲ ಸೌಕರ್ಯ ವ್ಯವಸ್ಥೆ

060220 Hadagali Feb 11th Karnika Prepation
Published on

ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕ ಫೆ.11ರಂದು ನಡೆಯುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ, ಗ್ರಾಪಂ, ಜಿಪಂನಿಂದ ಭರದ ಸಿದ್ಧ್ದತೆ ನಡೆದಿದೆ.

ಜಾತ್ರೆಗೆ ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕಳೆದೊಂದು ವಾರದಿಂದ ಮೈಲಾರದಲ್ಲೇ ಠಿಕಾಣಿ ಹೂಡಿದ್ದಾರೆ. ಜಿಲ್ಲಾಡಳಿತದ ನಿರ್ದೇಶನದಂತೆ ತಹಸೀಲ್ದಾರ್ ಕೆ.ರಾಘವೇಂದ್ರರಾವ್, ತಾಪಂ ಇಒ ಯು.ಎಚ್.ಸೋಮಶೇಖರ್ ಮೇಲುಸ್ತುವಾರಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಈಗಾಗಲೇ ಕಾರ್ಣಿಕ ನುಡಿಯುವ ಡೆಂಕನ ಮರಡಿಯಲ್ಲಿ ಭಕ್ತರಿಗಾಗಿ ಕುಡಿವ ನೀರಿನ ಸೌಲಭ್ಯಕ್ಕೆ 2 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕರ್ ಇರಿಸಲಾಗಿದೆ. ಗ್ರಾಪಂ ಆರು ಬೋರ್‌ವೆಲ್‌ಗಳಿಗೆ ಯಂತ್ರ ಅಳವಡಿಸಿದ್ದು, ಸೋಮಲಿಂಗೇಶ್ವರ ದೇವಸ್ಥಾನ, ಪುರಂದರ ಮಂಟಪದ ಹತ್ತಿರ ಹೊಸದಾಗಿ ಎರಡು ಬೋರ್‌ವೆಲ್ ಕೊರೆಯಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಎಲ್ಲ ಸಿದ್ಧ್ದತೆ ನಡೆಯುತ್ತಿದೆ.

ಮೈಲಾರ ಜಾತ್ರೆಯ ಸಂದರ್ಭ ನೈರ್ಮಲ್ಯ ಕಾಪಾಡಲು 150 ಸಿಬ್ಬಂದಿಯನ್ನು ನೇಮಿಸಲಾಗಿದೆ. ಸ್ವಚ್ಛತೆಗೆ ಅಗತ್ಯವಾದ ಫಿನಾಯಿಲ್, ಮೂಲ ಸೌಕರ್ಯಗಳ ಬಗ್ಗೆ ನಿಗಾ ವಹಿಸಲು ತಾಪಂ ಆರು ಸಿಬ್ಬಂದಿ ತಂಡವನ್ನು ರಚಿಸಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಲಾಗಿದೆ. | ಯು.ಎಚ್.ಸೋಮಶೇಖರ್ ತಾಪಂ ಇಒ ಹೂವಿನಹಡಗಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net