

ಸುಬ್ರಹ್ಮಣ್ಯ: ಕುಲ್ಕುಂದ ಬಸವನಮೂಲದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಾಲಯದಲ್ಲಿ ಅತಿರುದ್ರ ಮಹಾಯಾಗ ಮುಂದಿನ ವರ್ಷ ನವೆಂಬರ್‌ನಲ್ಲಿ ನೆರವೇರಲಿದ್ದು, ಪೂರ್ವಭಾವಿಯಾಗಿ ಶ್ರೀ ಮಹಾರುದ್ರ ಯಾಗ ಸೋಮವಾರ ನೆರವೇರಿತು.
ಶ್ರೀ ಮಹಾರುದ್ರ ಯಾಗದ ವೈದಿಕ ವಿಧಿವಿಧಾನಗಳು ಭಾನುವಾರ ಆರಂಭವಾಗಿತ್ತು. ಆರಂಭದಲ್ಲಿ ಅಷ್ಟದ್ರವ್ಯ ಗಣಪತಿ ಹವನ, ಗಣಪತಿ ಅಥರ್ವಶೀರ್ಷ ಹವನ, ಶತರುದ್ರಾಭಿಷೇಕ ನೆರವೇರಿತು. ಸಂಜೆ ಬಿಳಿನೆಲೆ ಶ್ರೀ ಗೋಪಾಲಕಷ್ಣ ಭಜನಾ ಮಂಡಳಿಯಿಂದ ಭಜನೆ ನೆರವೇರಿತು. ನಂತರ ಶ್ರೀ ಭಗವತಿ ಸೇವೆ ನಡೆಯಿತು. ಬಳಿಕ ಕಾರ್ತಿಕ ದೀಪಾರಾಧನೆ ನೆರವೇರಿತು.
ಭಾನುವಾರ ಬೆಳಗ್ಗೆ ಅತಿರುದ್ರಯಾಗ ವಿವಿಧ ವೈದಿಕ ವಿಧಿವಿಧಾನಗಳ ಮೂಲಕ ಆರಂಭವಾಯಿತು. ಬಳಿಕ ಯಾಗದ ಪೂರ್ಣಾಹುತಿಯಾಗಿ ಪ್ರಸಾದ ವಿತರಣೆ ನೆರವೇರಿತು. ರುದ್ರಯಾಗದಲ್ಲಿ 1333 ರುದ್ರಗಳನ್ನು ಜಪಿಸಿ ಮಹಾದೇವನಿಗೆ ಅರ್ಪಿಸಲಾಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಶ್ರೀ ದೇಗುಲದ ಪ್ರಧಾನ ಅರ್ಚಕ ಗಣೇಶ್ ದೀಕ್ಷಿತ್‌ರ ನೇತೃತ್ವದಲ್ಲಿ ಅರ್ಚಕರು ಮಹಾರುದ್ರಯಾಗದ ವೈದಿಕ ವಿಧಿವಿಧಾನ ನೆರವೇರಿಸಿದರು. ಮಹಾರುದ್ರಯಾಗಕ್ಕೆ ಭಕ್ತರು ಎಳ್ಳು, ಎಣ್ಣೆ, ತುಪ್ಪ, ಭತ್ತ ಮೊದಲಾದವುಗಳನ್ನು ಸಮರ್ಪಿಸಿದರು. ಹಸಿರು ಕಾಣಿಕೆಯನ್ನು ಭಕ್ತರು ಶ್ರೀ ದೇವರಿಗೆ ಸಮರ್ಪಿಸಿದರು. ರಾತ್ರಿ ಶ್ರೀ ದೇವರಿಗೆ ಅಷ್ಟಾವಧಾನ ಸೇವೆ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು. ಶ್ರೀ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು.