

ಪಿಎಚ್‌ಡಿ ನಡೆಸುವ ಸಲುವಾಗಿ ಐದು ತಿಂಗಳ ಹಿಂದೆ ಇಟಲಿಗೆ ತೆರಳಿ ಕರೊನಾ ಸೋಂಕಿನಿಂದ ತತ್ತರಿಸಿದ ನಾಡನ್ನು ಸಮೀಪದಿಂದ ಕಂಡು ಭಾನುವಾರ ದಕ್ಷಿಣ ಕನ್ನಡದ ಸುರತ್ಕಲ್ನ ತನ್ನ ಮನೆ ತಲುಪಿದ ಶ್ರೀಮಧು ತನ್ನ ಅನುಭವವನ್ನು ಇಲ್ಲಿ ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ.
ಮಂಗಳೂರು: ಮೆಡಿಟರೇನಿಯನ್ ಸಮುದ್ರದಲ್ಲಿ ಚಾಚಿರುವ ಬಹು ಸಣ್ಣ ಪರ್ಯಾಯ ದ್ವೀಪ ಇಟಲಿಯಲ್ಲಿ ಜಾಗತಿಕ ಮಾರಿ ಕರೊನಾ ಸೋಂಕು ಅಂಕೆ ಮೀರಿ ಬೆಳೆಯುತ್ತಿದೆ ಅಂದರೆ ಅಚ್ಚರಿಯಾಗುತ್ತದೆ. ರೋಮನ್ ಸಾಮ್ರಾಜ್ಯಕ್ಕಿದ್ದ ವಿಸ್ತಾರ ಮತ್ತು ಅಚ್ಚುಗಟ್ಟುತನ ಬೇರಾವ ಸಾಮ್ರಾಜ್ಯಕ್ಕೂ ಬರಲಾರದು ಎನ್ನುವ ಹೆಗ್ಗಳಿಕೆ ಹೊಂದಿದ್ದ ಈ ರಾಷ್ಟ್ರದಲ್ಲಿ ಲಾಕ್‌ಡೌನ್ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲೇ ಇಲ್ಲ.
ಬಹುಶಃ ಕಳೆದ ಮಾರ್ಚ್ ಎಂಟು ಬಳಿಕ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದರೂ ಸಾರ್ವಜನಿಕ ಸಂಚಾರ ವ್ಯವಸ್ಥೆ ಎಂದಿನಂತೆ ಇತ್ತು. ಹೋಟೆಲ್, ಮಾಲ್, ಪಬ್ ಸಹಿತ ಹಲವು ವ್ಯಾಪಾರ ಕೇಂದ್ರಗಳು ತೆರೆದಿದ್ದವು. ಅನೇಕ ಜನರು ತಮಗೆ ತಿರುಗಾಡಲೆಂದೇ ರಜೆ ನೀಡಲಾಗಿದೆ ಎಂದು ಭಾವಿಸಿದಂತಿತ್ತು. ಸಾಮಾಜಿಕ ಅಂತರವನ್ನು ಕೂಡ ಹೆಚ್ಚಿನವರು ಪಾಲಿಸುತ್ತಿರಲಿಲ್ಲ.
ಆರಂಭದಿಂಲೇ ನಿರ್ಲಕ್ಷ್ಯ: ಫೆಬ್ರವರಿ ಕೊನೆಯಲ್ಲೇ ಕರೊನಾ ಸೋಂಕು ಕಾಣಿಸಿಕೊಂಡಿತಾದರೂ ಬದಲಾದ ಪರಿಸ್ಥಿತಿ ಬಗ್ಗೆ ಆಡಳಿತ ವ್ಯವಸ್ಥೆಯು ಪೂರ್ಣ ನಿರ್ಲಕ್ಷ್ಯ ವಹಿಸಿತು. ಕರೊನಾ ಸೋಂಕು ಬಗ್ಗೆ 80 ವರ್ಷ ದಾಟಿದವರು ಹೆಚ್ಚು ಎಚ್ಚರಿಕೆ ವಹಿಸಿದರೆ ಸಾಕು. ಯುವಜನರು ಮತ್ತು ಮಕ್ಕಳಿಗೆ ಯಾವ ಭಯವೂ ಇಲ್ಲ. ಇದೊಂದು ಸಾಮಾನ್ಯ ಫ್ಲೂ ಜ್ವರ ಎನ್ನುವ ಮಾಹಿತಿ ಅಲ್ಲಿ ವ್ಯಾಪಕವಾಗಿತ್ತು. ಆಡಳಿತ ವ್ಯವಸ್ಥೆ ಈ ಬಗ್ಗೆ ಗಮನ ನೀಡುವಾಗ ತುಂಬಾ ತಡವಾಗಿತ್ತು. ಆಗಲೇ ಸೋಂಕು ಮರಣ ಮೃದಂಗ ಬಾರಿಸಲು ಆರಂಭಿಸಿತ್ತು. ಸೋಂಕು ಪೀಡಿತರು ಮತ್ತು ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಬೆಳೆಯುತ್ತಲೇ ಇತ್ತು.
ಎಂಬೆಸ್ಸಿ ಸಂಪರ್ಕ: ನಾನು ತಂಗಿದ್ದ ವಾಸದ ಮನೆ ಮತ್ತು ವಿಶ್ವವಿದ್ಯಾಲಯ ನಡುವೆ ಮಾತ್ರ ಓಡಾಡುವುದು ಸುರಕ್ಷತೆ ಒದಗಿಸಿತು. ಆದರೂ ದೇಶದ ಪರಿಸ್ಥಿತಿ ನಮಗೆ ಭಾರತೀಯ ವಿದ್ಯಾರ್ಥಿಗಳಲ್ಲಿ ಕಳವಳ ಮೂಡಿಸಿತು. ನಮ್ಮ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಉಂಟಾದರೆ ವ್ಯವಸ್ಥೆ ಮಾಡಿಕೊಳ್ಳುವುದು ಕಷ್ಟ ಅನಿಸಿತು. ಮಾರ್ಚ್ ಎಂಟು ವೇಳೆಗೆ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯನ್ನು ನಾವು ವಿದ್ಯಾರ್ಥಿಗಳು ಸಂಪರ್ಕಿಸಿದೆವು. ಇಟಲಿಯಲ್ಲಿ ಉಳಿದುಕೊಂಡಿರುವ ಭಾರತೀಯ ವಿದ್ಯಾರ್ಥಿಗಳಿಗೆ ಇಂಡಿಯನ್ ಏರ್‌ಲೈನ್ಸ್ ವಿಮಾನ ಮೂಲಕ ಭಾರತಕ್ಕೆ ತೆರಳುವ ವ್ಯವಸ್ಥೆಗಳನ್ನು ನಡೆಸುತ್ತಿರುವ ಬಗ್ಗೆ ಅಭಯ ದೊರೆಯಿತು. ಇಟಲಿಯಿಂದ ಭಾರತಕ್ಕೆ ಮೂರು ವಿಮಾನಗಳ ವ್ಯವಸ್ಥೆ ಆಯಿತು. ಎರಡು ವಿಮಾನಗಳು ರಾಜಧಾನಿ ರೋಮ್ ಹಾಗೂ ಇನ್ನೊಂದು ವಿಮಾನ ಮಿಲಾನ್‌ನಿಂದ ಹೊರಡುವುದು ರಾಯಭಾರಿ ಕಚೇರಿಯಿಂದ ಖಚಿತವಾಯಿತು.
ನಾನು ಹೊರಡಬೇಕಾಗಿದ್ದ ವಿಮಾನ ಮಿಲಾನ್ ನಿಲ್ದಾಣದಿಂದ ಮಾರ್ಚ್ 14ರಂದು ತೆರಳಲಿದ್ದು, ಸಿದ್ಧತೆ ನಡೆಸಿಕೊಳ್ಳುವಂತೆ ಸೂಚನೆ ದೊರೆಯಿತು. ನಮ್ಮ ವಿಮಾನದಲ್ಲಿ ಮೂವರು ಮೈಸೂರು, ತುಮಕೂರು ಹಾಗೂ ಬೆಳಗಾವಿಯ ತಲಾ ಓರ್ವರು ಸಹಿತ ಉನ್ನತ ವ್ಯಾಸಂಗ ನಡೆಸುತ್ತಿದ್ದ 21 ಮಂದಿ ಕರ್ನಾಟಕದ ವಿದ್ಯಾರ್ಥಿಗಳು ಪ್ರಯಾಣಿಸಿದೆವು. ಮಿಲಾನ್‌ನಿಂದ ಹೊರಡುವ ಸಂದರ್ಭದಲ್ಲಿ ಕೂಡ ಸ್ಯಾನಿಟೈಸರ್, ಟೆವೆಲ್, ಮಾಸ್ಕ್ ಸಹಿತ ಎಲ್ಲ ಸುರಕ್ಷಾ ಸಾಮಗ್ರಿಗಳ ವ್ಯವಸ್ಥೆಯನ್ನು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಒದಗಿಸಿದರು.
ಸ್ಯಾನಿಟೈಸರ್, ಮಾಸ್ಕ್ ಕೊರತೆ: ಜಗತ್ತಿನ ವಿವಿಧೆಡೆ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಇಟಲಿಯ ಪರಿಸ್ಥಿತಿ ಅವಲೋಕಿಸಿದಾಗ ಭಯ ಶುರುವಾಯಿತು. ಶಾಲಾ ಕಾಲೇಜುಗಳಿಗೆ ಆರಂಭದಲ್ಲಿ ರಜೆ ನೀಡಿದ್ದರೂ ಪಿಎಚ್‌ಡಿ ಅಧ್ಯಯನ ಸಲುವಾಗಿ ನಾನು ಹಾಗೂ ನನ್ನಂತೆ ಉಳಿದುಕೊಂಡಿರುವ ಇತರ ವಿದ್ಯಾರ್ಥಿಗಳು ಟೊರಿನೊ ವಿಶ್ವವಿದ್ಯಾಲಯಕ್ಕೆ ಸಾರ್ವಜನಿಕ ಸಾರಿಗೆ ಮೂಲಕ ಪ್ರಯಾಣಿಸಬೇಕಿತ್ತು. ಸುರಕ್ಷತೆಗೆ ಮಾಸ್ಕ್, ಸ್ಯಾನಿಟೈಸರ್ ಕೊಳ್ಳೋಣವೆಂದು ಔಷಧ ಮಾರಾಟ ಕೇಂದ್ರಗಳಿಗೆ ತೆರಳಿದರೆ ಅಲ್ಲಿ ಸ್ಟಾಕ್ ಇರಲಿಲ್ಲ. ಸಾರ್ವಜನಿಕವಾಗಿ ಜನರು ಮಾಸ್ಕ್ ಬಳಸುವ ಅಭ್ಯಾಸ ಇಟ್ಟುಕೊಂಡಿರುವಂತೆ ಕಾಣಲಿಲ್ಲ.