

ಕಳಸ: ಈ ದೇಶಕ್ಕೆ 24 ಕೋಟಿ ಸಾಮಾನ್ಯ ಬಡವರನ್ನು ಬಡತನ ರೇಖೆಗಿಂತ ಮೇಲೆ ತಂದಂತ ಕೀರ್ತಿ ದೇಶದ ಪ್ರಧಾನ ಮಂತ್ರಿಗೆ ಇದ್ದರೆ, ಈ ಭಾಗದ ಬಡವರಿಗೆ ಸೂರು ನಿರ್ಮಿಸಿ ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮಕ್ಕಳ ವಿದ್ಯಾಬ್ಯಾಸಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ಈ ಭಾಗದ ಬಡವರ ಪಾಲಿಗೆ ಶ್ರೀ ಕ್ಷೇತ್ರ ಹೊರನಾಡು ದಾರಿ ದೀಪವಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ಹೊರನಾಡು ದೇವಸ್ಥಾನದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಲ್ಲಿ ಧಾರ್ಮಿಕ ಭಾವನೆ ಬಂದರೆ ಮಾತ್ರ ಇನ್ನು ಸಾವಿರಾರು ವರ್ಷ ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ ಗಟ್ಟಿಯಾಗಿ ನಿಲ್ಲುತ್ತದೆ ಎಂದರು.
ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಬೇಕು ಎನ್ನುವ ಬೇಡಿಕೆ ಇದೆ. ಈ ಬಗ್ಗೆ ಸರ್ವೇ ನಡೆಸಿ ರೈಲು ತರುವ ಪ್ರಯತ್ನ ಮಾಡಲಾಗುವುದು. ಒತ್ತುವರಿ ತೆರವಿನ ಬಗ್ಗೆ ಯಾರೂ ಚಿಂತಿಸುವ ಅಗತ್ಯವಿಲ್ಲ. ನಾವು ಎಂದಿಗೂ ಬಡವರ ಪರವಾಗಿ ಇರುತ್ತೇವೆ ಎಂದು ಹೇಳಿದರು.
ಹೊರನಾಡು ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿ, ಜನಸಾಮಾನ್ಯರು ನೆಮ್ಮದಿಯಿಂದ ಬದುಕುವ ವಾತಾವರಣವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರ್ಮಿಸಬೇಕು. ಜನಪ್ರತಿನಿಧಿಗಳು ಸಮರ್ಪಕವಾಗಿ ಸರಿಯಾದ ನಿರ್ಧಾರ ತೆಗೆದುಕೊಂಡು ರಾಷ್ಟ್ರದ ಪ್ರತಿಯೊಬ್ಬರೂ ನೆಮ್ಮದಿಯಾಗಿ ಬದುಕುವ ವಾತಾವರಣ ನಿರ್ಮಿಸಬೇಕು. ವಿಧಾನ ಸೌಧದ ಮಟ್ಟಿಲು ಹತ್ತುವಾಗ ಸರ್ಕಾರದ ಕೆಲಸ ದೇವರ ಕೆಲಸ ಎಂದು ಇದೆ. ಆ ಸರ್ಕಾರದ ಕೆಲಸ ದೇವರ ಕೆಲಸವಾಗಿಯೇ ಆಗಬೇಕು ಎಂದು ಹೇಳಿದರು.
ಶಾಸಕಿ ನಯನಾ ಮೋಟಮ್ಮ ಮಾತನಾಡಿ ಈ ಹಿಂದೆ ಆದ ಘಟನೆಗಳನ್ನು ನೆನಪಿನಲ್ಲಿಟ್ಟುಕೊಂಡು ಮುಂದಿನ ದಿನದಲ್ಲಿ ನಮ್ಮ ಭವಿಷ್ಯಕ್ಕಾಗಿ ಸೂಕ್ಷ್ಮವಾದ ಪರಿಸರವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೇಲ್ಲರ ಮುಂದಿದೆ ಎಂದರು.