ಅಮೆರಿಕದ ಅಟ್ಲಾಂಟದಲ್ಲಿ ಶ್ರೀಕೃಷ್ಣ ಮಂದಿರ ಭೂಮಿಪೂಜೆ

UDP-7-1A-PuttigeMata
Published on

ಉಡುಪಿ: ವಿಶ್ವಾದ್ಯಂತ ಶ್ರೀಕೃಷ್ಣ ಭಕ್ತಿ ಪ್ರಸಾರ ದೀಕ್ಷೆ ಹೊಂದಿರುವ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಮೆರಿಕದ ಅಟ್ಲಾಂಟದಲ್ಲಿ ಶ್ರೀಕೃಷ್ಣನ ಬೃಹತ್​ ಮಂದಿರ ನಿಮಾರ್ಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಅಲ್ಲಿನ ಭಕ್ತರ ಸಹಕಾರದೊಂದಿಗೆ ಶ್ರೀಕೃಷ್ಣನ ಬೃಹತ್​ ಮಂದಿರ ನಿಮಾರ್ಣಕ್ಕಾಗಿ ಆರು ಎಕರೆ ಜಾಗ ಖರೀದಿಸಲಾಗಿದೆ. ಶ್ರೀಗಳು ಉಡುಪಿ ಶ್ರೀಕೃಷ್ಣನ ಪರ್ಯಾಯ ಮುಗಿಸಿ, ಮರಳಿ ಅಮೆರಿಕಕ್ಕೆ ಬರುವಷ್ಟರಲ್ಲಿ ಶ್ರೀಕೃಷ್ಣನ ಮೂರ್ತಿ ಪ್ರತಿಷ್ಠಾಪನೆಯ ಮೂಲಕ ಮಂದಿರದ ವಿಧ್ಯುಕ್ತ ಲೋಕಾರ್ಪಣೆಗೆ ಅಲ್ಲಿನ ಭಕ್ತರು ಸಂಕಲ್ಪ ಮಾಡಿದ್ದಾರೆ.

ಅಂಟ್ಲಾಂಟ ಆರನೇ ಮಠ
ಪುತ್ತಿಗೆ ಶ್ರೀಗಳು ಅಮೆರಿಕದಲ್ಲಿ ಸ್ಥಾಪಿಸಿರುವ 11 ಮಠಗಳಲ್ಲಿ ಇದು (ಅಂಟ್ಲಾಂಟ) ಆರನೇ ಶಾಖಾ ಮಠವಾಗಿದೆ. ಇದೀಗ ಸಣ್ಣ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಕಲ್ಪಿತ ಶ್ರೀಕೃಷ್ಣ ಮಂದಿರದ ಗರ್ಭಗುಡಿಯ ಕೆಳಗೆ 700 ಶ್ಲೋಕ ಕೆತ್ತಿಸಿದ ಇಟ್ಟಿಗೆಗಳನ್ನು ಭಕ್ತರ ಹೆಸರಿನಲ್ಲಿ ಇಡಲಾಗುತ್ತಿದೆ. ತನ್ಮೂಲಕ ಶ್ರೀಗಳ ಕೋಟಿ ಗೀತಾ ಲೇಖನ ಯೋಜನೆಯ ಸ್ಮಾರಕವಾಗಿ ಅಮೆರಿಕದಲ್ಲಿ ಶ್ರೀಕೃಷ್ಣನ ಬೃಹತ್​ ಮಂದಿರ ಸ್ಥಾಪನೆಗೊಳ್ಳಲಿದೆ.

ಭೂಮಿಪೂಜೆಯ ಧಾರ್ಮಿಕ ವಿಧಿವಿಧಾನಗಳನ್ನು ಉಡುಪಿಯ ಹೆರ್ಗ ವೇದವ್ಯಾಸ ಭಟ್​ ನೆರವೇರಿಸಿದರು. ಮಠದ ಪ್ರಧಾನ ಅರ್ಚಕ ಜಯಪ್ರಸಾದ್​ ಅಮ್ಮಣ್ಣಾಯ ಮುಂದಾಳತ್ವದಲ್ಲಿ ನಡೆಯುತ್ತಿರುವ ಮಂದಿರ ನಿರ್ಮಾಣ ಯೋಜನೆಯ ವಿವರವನ್ನು ಪ್ರಧಾನ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ವಿವರಿಸಿದರು. ವಿದ್ವಾನ್​ ಕೇಶವ ರಾವ್​ ತಡಿಪಾತ್ರಿ, ಬಾಲಕೃಷ್ಣ ಭಟ್​, ಹರೀಶ್​ ಭಟ್​, ಅಜಯ್​, ಮುರಳಿ, ಶ್ರೀಕಾಂತ್​ ಹಾಜರಿದ್ದರು. ಮಠದ ನೂರಾರು ಭಕ್ತರು ಭೂಮಿಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net