

ಜಗಳೂರು: ಕೃಷ್ಣ ಹುಟ್ಟಿದ ಸಮುದಾಯ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಮುಂದುವರಿಯಬೇಕಾಗಿದೆ. ನಮ್ಮಲ್ಲಿನ ಸಣ್ಣ ವೈಮನಸ್ಸುಗಳು ಸಮಾಜವನ್ನು ಕತ್ತಲೆಗೆ ದೂಡಬಾರದು ಎಂದು ಚಿತ್ರದುರ್ಗದ ಯಾದವ ಸಂಸ್ಥಾನದ ಪೀಠಾಧಿಪತಿ ಶ್ರೀಕೃಷ್ಣ ಯಾದವಾನಂದ ಮಹಾಸ್ವಾಮೀಜಿ ತಿಳಿಸಿದರು.
ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಯಾದವ ಸಮುದಾಯದಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶ್ರೀಕೃಷ್ಣದೇವ ಮಾನವ ಹಾಗೂ ಜಾತಿ ರಹಿತನಾಗಿದ್ದು, ಎಲ್ಲರಿಗೂ ಚಿರಪರಿಚಿತನಾಗಿದ್ದಾನೆ. ಕೃಷ್ಣ ಹುಟ್ಟಿದ್ದು ಯಾದವ ಕುಲದಲ್ಲಾದರೂ ಬಹುತೇಕ ಜನರು ಕೃಷ್ಣನನ್ನು ಆರಾಧಿಸುತ್ತಾರೆ. ಕೃಷ್ಣನನ್ನು ಮುರಳಿ, ಗೋಪಾಲ, ಪರಮಾತ್ಮ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತೇವೆ ಎಂದರು.
ಜಗತ್ತನ್ನು ಪರಿಪೂರ್ಣಗೊಳಿಸುವ ನಮ್ಮ ಪ್ರಯತ್ನದಲ್ಲಿ ನಮ್ಮನ್ನು ನಾವು ಪರಿಪೂರ್ಣವಾಗಿ ರೂಪಿಸಿಕೊಳ್ಳುತ್ತೇವೆ. ಇದುವೇ ಮಾನವ ಜೀವನದ ಗುರಿ. ಮಹಾಭಾರತ ಯುದ್ಧದಲ್ಲಿ ಪಾಂಡವರ ಪರವಾಗಿ ನಿಂತು ಗೆಲ್ಲುವಂತೆ ಮಾಡಿದವರು ಶ್ರೀಕೃಷ್ಣ್ಣ. ಆತನನ್ನು ಎಷ್ಟು ಅರ್ಥಮಾಡಿಕೊಂಡರೂ ಸಾಲದು ಎಂದು ಬಣ್ಣಿಸಿದರು.
ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಮಾತನಾಡಿ, ಜಗತ್ತಿನಲ್ಲಿ ದುಷ್ಟರ ಕಾಟ ಜಾಸ್ತಿಯಾದಾಗ ಜಗದ ಉಳಿವಿಗಾಗಿ ಪ್ರತಿಯೊಂದು ಯುಗದಲ್ಲಿ ನಾನಾ ಅವತಾರಗಳಲ್ಲಿ ಕೃಷ್ಣ ಹುಟ್ಟಿ ಬರುತ್ತಾನೆ. ಇಡೀ ಮಾನವ ಕುಲವನ್ನು ಕಾಪಾಡುವ ಭಗವಂತ ಶ್ರೀಕೃಷ್ಣ ಎಂದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್, ಬಿಜೆಪಿ ಮುಖಂಡ ಅನಿತ್‌ಕುಮಾರ್, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿದರು.
ಯಾದವ ಸಂಘದ ಅಧ್ಯಕ್ಷ ಜಿ.ಸಿ. ಕೃಷ್ಣಮೂರ್ತಿ, ಎಂಎಲ್‌ಸಿ ಜಯಮ್ಮ ಬಾಲರಾಜ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ಮಹಮದ್ ಗೌಸ್, ಮುಖಂಡ ತೋರಣಗಟ್ಟೆ ಜೀವಣ್ಣ, ಕಾಡುಗೊಲ್ಲ ಯುವ ಸೇನೆ ಅಧ್ಯಕ್ಷ ಜಿ.ಆರ್. ಇಂದ್ರೇಶ್, ಪಲ್ಲಾಗಟ್ಟೆ ಶೇಖರಪ್ಪ, ನಜೀರ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಲ್ಯಾಬ್ ಶಿವು, ಯಾದವ ಸಂಘದ ಕಾರ್ಯದರ್ಶಿ ಬಿ.ಎನ್. ಪ್ರಕಾಶ್, ತೋರಣಗಟ್ಟೆ ಟಿ.ಜಿ. ಬಾಲಪ್ಪ, ಬಿ. ಬಾಲಪ್ಪ, ಗೊಲ್ಲರಹಟ್ಟಿ ತಿಪ್ಪೇಶ್, ಹಿರಿಯ ಸಂಶೋಧಕ ಸಿ. ಧನಂಜಯ್‌ಕುಮಾರ್ ಮತ್ತಿತರರಿದ್ದರು.