ಮಕ್ಕಳಲ್ಲಿಲ್ಲ ಮೋಸ, ದ್ವೇಷ, ವಂಚನೆ ಭಾವನೆ

chn
Published on

ಚನ್ನಗಿರಿ: ಅಧರ್ಮ ಹೆಚ್ಚಾದಂತೆ ನಾನು ಮತ್ತೆ ಹುಟ್ಟಿ ಬಂದು ಧರ್ಮ ಕಾಪಾಡುವ ಕಾರ್ಯ ಮಾಡುವುದಾಗಿ ಶ್ರೀಕೃಷ್ಣ ಮಹಾಭಾರತದಲ್ಲಿ ಹೇಳಿದ್ದಾರೆ ಎಂದು ಶ್ರೀ ಹಾಲಸ್ವಾಮಿ ವಿರಕ್ತಮಠದ ಡಾ. ಶ್ರೀ ಬಸವಜಯಚಂದ್ರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಶ್ರೀ ವಿಠ್ಠಲ ರುಕುಮಾಯಿ ಕಲ್ಯಾಣ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಹಿಂದು ಪರಿಷತ್ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರಂಭ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಮಕ್ಕಳಿಗೆ ರಾಧಾ- ಕೃಷ್ಣರ ವೇಷಭೂಷಣ ತೊಡಿಸಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುವುದೇ ಮಕ್ಕಳಲ್ಲಿ ದೇವರಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅವರಲ್ಲಿ ಮೋಸ, ಕಪಟ, ವಂಚನೆ, ದ್ವೇಷ ಇರುವುದಿಲ್ಲ. ಅವರಲ್ಲಿ ಪ್ರೀತಿ ಮಾತ್ರ ಕಾಣುತ್ತೇವೆ. ಧರ್ಮ ಕಾಪಾಡುವಂಥ ಎಲ್ಲರನ್ನು ದೇವರ ರೂಪದಲ್ಲಿ ಕಾಣುತ್ತಾರೆ ಎಂದರು.

ವಿಶ್ವ ಹಿಂದು ಪರಿಷತ್‌ನ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಘು ಸಕಲೇಶಪುರ ಮಾತನಾಡಿ, 60 ವರ್ಷಗಳನ್ನು ಪೂರೈಸಲಿರುವ ವಿಶ್ವ ಹಿಂದು ಪರಿಷತ್ ತನ್ನ ಅಸ್ತಿತ್ವವನ್ನು ದೇಶಾದ್ಯಂತ 60 ಸಾವಿರ ಗ್ರಾಮಗಳಿಂದ 1 ಲಕ್ಷ ಗ್ರಾಮಗಳಿಗೆ ವಿಸ್ತರಿಸಲು ಯೋಜಿಸಿದೆ. ಸ್ವಾತಂತ್ರ್ಯಪೂರ್ವದಲ್ಲಿ ಒಂದೇ ಮಾತರಂ ಹೇಳಿದ ಎಲ್ಲರನ್ನು ಸಾವಿಗೆ ತಳ್ಳಲಾಗುತ್ತಿತ್ತು. ಆದರೆ, ಇಂದು ಎಲ್ಲ ಹಿಂದುಗಳು ಏಕಕಾಲದಲ್ಲಿ ಹೇಳುವಂತೆ ಆಗಬೇಕಿದೆ ಎಂದರು.
ರಾಧಾ- ಕೃಷ್ಣ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಬಹುಮಾನ ನೀಡಲಾಯಿತು.

ಕುರುಬ ಸಮಾಜದ ಅಧ್ಯಕ್ಷ ಕೆ.ಆರ್.ಗೋಪಿ ಅಧ್ಯಕ್ಷತೆ ವಹಿಸಿದ್ದರು. ಆದಿ ಕರ್ನಾಟಕ ಸಮಾಜದ ಮುಖಂಡ ಟಿ.ರಂಗಪ್ಪ, ವಿಶ್ವ ಹಿಂದು ಪರಿಷತ್ ಜಿಲ್ಲಾ ಸಹಕಾರ್ಯದರ್ಶಿ ಎನ್.ರವಿಚಂದ್ರ, ಎ.ಎನ್.ಶಶಿಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net