ಶ್ರೀ ಕೋಟೆ ಮಾರಿಯಮ್ಮ ವಾರ್ಷಿಕೋತ್ಸವ ನಾಳೆಯಿಂದ

21adarshkdga1
Published on

ಮಡಿಕೇರಿ: ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ, ನಾಗದರ್ಶನ, ಪಾಷಾಣಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ದೈವ ಕೋಲವು ಮೇ೨೨ ರಿಂದ ಆರಂಭಗೊಳ್ಳಲಿದೆ ಶ್ರೀಕೋಟೆ ಮಾರಿಯಮ್ಮ ದೇವಾಲಯ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.


ಪಯ್ಯನ್ನೂರ್ ಆಚಾರ್ಯ ಈಶ್ವರನ್ ನಂಬೂದರಿ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಮೇ೨೨ ರಂದು ಸಂಜೆ ೬ ಗಂಟೆಗೆ ಆಚಾರ್ಯ ವರಣಂ, ಪುಣ್ಯಹ ಶುದ್ಧಿ, ಸುದರ್ಶನ ಹೋಮ, ದೇವಿ ಪೂಜೆ, ಲಲಿತಾ ಸಹಸ್ರನಾಮಾರ್ಚನೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.


ಮೇ೨೩ ರಂದು ಬೆಳಿಗ್ಗೆ ೬ ಗಂಟೆಯಿಂದ ಮಹಾಗಣಪತಿ ಹೋಮ, ನವಕ ಪಂಚಗವ್ಯ, ಕಳಸ ಪೂಜೆ, ಕಳಶಾಭಿಷೇಕ, ಸರ್ವಾಲಂಕಾರ, ಮಹಾಪೂಜೆ ಹಾಗೂ ಪಾಷಾಣಮೂರ್ತಿ ದೈವದ ಕಳಸ ಪೂಜೆ, ಅಲಂಕಾರ ಪೂಜೆ ಮತ್ತು ಮಂಗಳಾರತಿ ನಡೆಯಲಿದೆ.


ನಾಗದರ್ಶನ: ಬೆಳಿಗ್ಗೆ ೮ ಗಂಟೆಗೆ ಆಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭಿಷೇಕ ನಡೆಯಲಿದ್ದು, ಪೂರ್ವಾಹ್ನ ೧೧ ಗಂಟೆಗೆ ನಾಗದರ್ಶನ, ಮಹಾ ಪೂಜೆ, ಪ್ರಸಾದ ವಿತರಣೆ ಮತ್ತು ಮಧ್ಯಾಹ್ನ ೧೨.೩೦ಕ್ಕೆ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಲಿದೆ. ಉಡುಪಿಯ ಪೆಲರ್ಂಪಾಡಿ ರಮಾನಂದ ಭಟ್ ನಾಗಪಾತ್ರಿಗಳಾಗಿ ನಾಗಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ನಾಗದರ್ಶನ ನಡೆಸಿಕೊಡಲಿದ್ದಾರೆ.


ಅಗೆಲು ಸೇವೆ: ರಾತ್ರಿ ೭.೩೦ರಿಂದ ಪಾಷಾಣಮೂರ್ತಿ ದೈವಕೋಲ ಮತ್ತು ಮೇ೨೪ ರಂದು ಸಂಜೆ ೫ ಗಂಟೆಯಿಂದ ಪಾಷಾಣಮೂರ್ತಿ ದೈವದ ಅಗೆಲು ಸೇವೆ ನಡೆಯಲಿದೆ. ಅಗೆಲು ಸೇವೆ ನೀಡುವ ಭಕ್ತರು ಒಂದು ದಿನ ಮುಂಚಿತವಾಗಿ ದೇವಾಲಯದಲ್ಲಿ ರಶೀದಿಯನ್ನು ಪಡೆದುಕೊಳ್ಳಬೇಕೆಂದು ಶ್ರೀಕೋಟೆ ಮಾರಿಯಮ್ಮ ದೇವಾಲಯ ಟ್ರಸ್ಟ್ ಮನವಿ ಮಾಡಿದೆ ಮತ್ತು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net