

ಹನುಮಸಾಗರ: ಮಹಿಳೆಯರು ತಪ್ಪದೆ ಮತದಾನ ಮಾಡಬೇಕು ಎಂದು ಗ್ರಾಪಂ ಸದಸ್ಯೆ ನೀಲಮ್ಮ ವಿದ್ಯಾಧರ ಸೊಪ್ಪಿಮಠ ಹೇಳಿದರು.
ಪಟ್ಟಣದ ಶ್ರೀ ಕರಿಸಿದ್ಧೇಶ್ವರ ಮಠದ ಬಸವ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಚುನಾವಣೆ ದಿನ ನಮ್ಮ ಕೆಲಸಗಳನ್ನು ಬದಿಗೊತ್ತಿ ಮತದಾನ ಮಾಡಲು ಸಮಯ ಮೀಸಲಿಡಬೇಕು. ನಿಮ್ಮ ಮತ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಮಾರಾಟ ಮಾಡಿಕೊಳ್ಳದೆ ಯೋಗ್ಯ ವ್ಯಕ್ತಿಗೆ ಮತದಾನ ಮಾಡಬೇಕು ಎಂದರು. ಬಳಿಕ ಮತದಾನ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಕಿಶನರಾವ್ ಕುಲಕರ್ಣಿ, ಮಾಸ್ಟರ್ ಟ್ರೈನರ್ ರಾಮಚಂದ್ರ ಬಡಿಗೇರ ಇವಿಎಂ, ವಿವಿ ಪ್ಯಾಡ್ ಬಳಕೆ ಮಾಡುವ ವಿಧಾನ ತಿಳಿಸಿದರು. ಪಿಡಿಒ ದೇವೇಂದ್ರಪ್ಪ ಕಮತರ, ಎಸ್‌ಡಿಎ ವೀರನಗೌಡ ಪಾಟೀಲ್, ಮಹಾಂತಯ್ಯ ಕೋಮಾರಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶಿವಲೀಲಾ, ಬಸಮ್ಮ ಹಿರೇಮಠ, ಸುನೀತಾ ಕೋಮಾರಿ ಇತರರಿದ್ದರು.