

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಸಕ್ತ ಸಾಲಿನಲ್ಲಿ 30.26 ಲಕ್ಷ ರೂ.ಲಾಭ ಗಳಿಸಿದ್ದು ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಣೆ ಮಾಡಲಾಯಿತು.
ಮೆಲ್ಕಾರ್‌ನಲ್ಲಿ ಸೋಮವಾರ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಈ ಮಾಹಿತಿ ನೀಡಿದರು. ಸಂಘ 5 ಶಾಖೆಗಳನ್ನು ಹೊಂದಿದ್ದು 2023-24ನೇ ಸಾಲಿನಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆದು ವಿವಿಧ ಯೋಜನೆಗಳ ಮೂಲಕ ಸದಸ್ಯರಿಂದ 25 ಕೋಟಿ ರೂ.ಗೂ ಮಿಕ್ಕಿ ಠೇವಣಿ ಸಂಗ್ರಹಿಸಿ 22 ಕೋಟಿ ರೂ.ಗೂ ಮಿಕ್ಕಿ ಸಾಲ ನೀಡುವ ಗುರಿ ಹೊಂದಿದೆ ಎಂದು ಹೇಳಿದರು. ವರದಿ ಸಾಲಿನಲ್ಲಿ 89.77ಲಕ್ಷ ಪಾಲು ಬಂಡವಾಳ, 20 ಕೋಟಿ ರೂ.ವಿವಿಧ ಠೇವಣಿ ಸಂಗ್ರಹಿಸಿ 18 ಕೋಟಿ ಸಾಲ ನೀಡಲಾಗಿದೆ ಎಂದು ಹೇಳಿದರು.
ಸಂಘದ ಸದಸ್ಯರ 104 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಇತ್ತೀಚೆಗೆ ನಿಧನರಾದ ಸಂಘದ ನಿರ್ದೇಶಕ ಉಮೇಶ್ ಸುವರ್ಣ ತುಂಬೆ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಮೆಲ್ಕಾರ್ ಶಾಖೆಯ ಪಿಗ್ಮಿ ಸಂಗ್ರಾಹಕ ಆನಂದ ಪೂಜಾರಿ ಕೆಲ್ದೋಡಿಯವರನ್ನು ಸನ್ಮಾನಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಕುಮಾರ್ 2023-24ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು, ಉಪಾಧ್ಯಕ್ಷರಾದ ರಮೇಶ್ ಅನ್ನಪಾಡಿ ಸ್ವಾಗತಿಸಿ ನಿರ್ದೇಶಕರಾದ ರತ್ನಾಕರ ಪೂಜಾರಿ ನಾಡರು ವಂದಿಸಿದರು. ನಿರ್ದೇಶಕರಾದ ಕೆ.ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಭುವನೇಶ್ ಪಚ್ಚಿನಡ್ಕ, ರತ್ನಾಕರ ಪೂಜಾರಿ ಮೆಲ್ಕಾರ್, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ತುಳಸಿ ಇರಾ, ಲಕ್ಷ್ಮೀ ಪೆರ್ವ ಉಪಸ್ಥಿತರಿದ್ದರು.