ಫೈನಲ್​ಗೆ ಶ್ರೀ ದುರ್ಗಾ ಸ್ಪೋರ್ಟ್ಸ್, ಟಿಎಸ್​ಸಿಎ

cricket today
Published on

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆನಗರ ಕೆಜಿಎ ಮೈದಾನದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾ ಕಪ್-16 ವಯೋಮಿತಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ (ಟಿಎಸ್​ಸಿಎ) ಫೈನಲ್ ಪ್ರವೇಶಿಸಿದವು.

ಶನಿವಾರ ಮೊದಲ ಸೆಮಿಫೈನಲ್​ನಲ್ಲಿ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ, ಚಿಕ್ಕೋಡಿಯ ಲಕ್ಷ್ಯ ಕ್ರಿಕೆಟ್ ಅಕಾಡೆಮಿ ವಿರುದ್ಧ 9 ವಿಕೆಟ್​ಗಳಿಂದ ಜಯಿಸಿತು. ಲಕ್ಷ್ಯ ಕ್ರಿಕೆಟ್ ಅಕಾಡೆಮಿ 19 ಓವರ್​ಗಳಲ್ಲಿ 50 ರನ್ ಮೊತ್ತಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು. ಸಾಯೀಶ್ 13 ರನ್ ಗಳಿಸಿದರು. ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಪರವಾಗಿ ಪೃಥ್ವಿ ಕರ್ಜಗಿ 3, ಪ್ರೀತಂ ಸುಂಕಾಪುರ 3 ಹಾಗೂ ಈರಪ್ಪ ಘಂಟಿ 2 ವಿಕೆಟ್​ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

ಸುಲಭ ಮೊತ್ತ ಬೆನ್ನತ್ತಿದ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ 8 ಓವರ್​ಗಳಲ್ಲಿ 1ವಿಕೆಟ್ ಕಳೆದುಕೊಂಡು 51 ರನ್ ಗಳನ್ನು ಕಲೆ ಹಾಕಿ ಫೈನಲ್​ಗೆ ಪ್ರವೇಶಿಸಿತು. ಸಚಿನ್ ಭಟ್ ಅತ್ಯಧಿಕ 20 ರನ್ ಬಾರಿಸಿದರು.

2ನೇ ಸೆಮಿಫೈನಲ್​ನಲ್ಲಿ ಹುಬ್ಬಳ್ಳಿಯ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ, ಬೆಳಗಾವಿಯ ಆನಂದ ಕ್ರಿಕೆಟ್ ಅಕಾಡೆಮಿಯನ್ನು 51ರನ್​ಗಳ ಅಂತರದಿಂದ ಹಣಿಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟಿಎಸ್​ಸಿಎ 24.5ಓವರ್​ಗಳಲ್ಲಿ ಆಲೌಟ್ ಆಗಿ 109 ರನ್ ಗಳಿಸಿತ್ತು. ಸಾಯಿನಾಥ ರಾಜೋಳಿ 39 ರನ್, ಶುಭಂ ಎಂ. 23ರನ್ ಹಾಗೂ ವೈಭವ ಕೆ. 20 ರನ್ ಗಳಿಸಿದರು. ಆನಂದ ಕ್ರಿಕೆಟ್ ಅಕಾಡೆಮಿ ಪರವಾಗಿ ಲಕ್ಷ ವೆರ್ಣೆಕರ್ 4, ಸುಮೀತ ಕೆ. 3 ವಿಕೆಟ್ ಗಳನ್ನು ಕಬಳಿಸಿದರು.

ಬಳಿಕ ಬ್ಯಾಟಿಂಗ್ ಮಾಡಿದ ಆನಂದ ಕ್ರಿಕೆಟ್ ಅಕಾಡೆಮಿ 15.5 ಓವರ್​ಗಳಲ್ಲಿ 58 ರನ್ ಮೊತ್ತಕ್ಕೆ ಆಲೌಟ್ ಆಯಿತು. ಹೈದರಾಲಿ ಸೈಯದ್ 18ರನ್ ಗಳಿಸಿದ್ದೆ ಅತ್ಯಧಿಕ ಗಳಿಕೆಯಾಗಿದೆ. ಟಿಎಸ್​ಸಿಎ ಪರವಾಗಿ ಸಾಯಿನಾಥ ರಾಜೋಳಿ ಹಾಗೂ ತೇಜಸ್ ಎಚ್. ತಲಾ 4 ವಿಕೆಟ್ ಕಬಳಿಸಿ ಗೆಲುವಿಗೆ ಕಾರಣರಾದರು.

ಅ. 22ರಂದು ಮಧ್ಯಾಹ್ನ 1ಗಂಟೆಗೆ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಹುಬ್ಬಳ್ಳಿ- ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಹುಬ್ಬಳ್ಳಿ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net