ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ ಶ್ರೀ ಚಿದಾನಂದ ಸ್ವಾಮೀಜಿ

ಮೈಸೂರು ನಗರದ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ದಿವ್ಯ ನೆನಹು ಕಾರ್ಯಕ್ರಮದಲ್ಲಿ ಶ್ರೀ ಚಿದಾನಂದ ಸ್ವಾಮೀಜಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು.
ಮೈಸೂರು ನಗರದ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ದಿವ್ಯ ನೆನಹು ಕಾರ್ಯಕ್ರಮದಲ್ಲಿ ಶ್ರೀ ಚಿದಾನಂದ ಸ್ವಾಮೀಜಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು.
Published on: 

ಮೈಸೂರು: ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ನಿಲಯ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶ್ರೀ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದು ತಿ. ನರಸೀಪುರ ತಾಲೂಕಿನ ಮದ್ಗಾರ ಲಿಂಗಯ್ಯನಹುಂಡಿಯ ಶ್ರೀ ವಿರಕ್ತ ಮಠದ ಶ್ರೀ ಗೌರಿಶಂಕರ ಸ್ವಾಮೀಜಿ ಹೇಳಿದರು.

ನಗರದ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ಕರ್ನಾಟಕ ಪ್ರತಿಧ್ವನಿ ವೇದಿಕೆ ವತಿಯಿಂದ ಬುಧವಾರ ಆಯೋಜಿಸಿದ್ದ ಶ್ರೀ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಅವರ ದಿವ್ಯ ನೆನಹು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸ್ವಾಮೀಜಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಅವರ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಅನೇಕರು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದರು.

ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಸ್ವಾಮೀಜಿ ಅತ್ಯಂತ ವಿನಯಶೀಲರಾಗಿದ್ದರು. ಬೆಟ್ಟದಂತಹ ಕಷ್ಟಗಳು ಎದುರಾದರೂ ಧೈರ್ಯದಿಂದ ಎದುರಿಸುತ್ತಿದ್ದರು. ಸರಳ ಜೀವನ ನಡೆಸಿದ ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ. ಮೈಸೂರಿನಲ್ಲಿ ಬಸವ ಜಯಂತಿ ಆಚರಣೆಗೆ ಅಡಿಪಾಯ ಹಾಕಿದ ಸ್ವಾಮೀಜಿ, ಸಮಾಜದಲ್ಲಿ ಬೇರೂರಿದ್ದ ಮೌಢ್ಯವನ್ನು ಹೋಗಲಾಡಿಸಲು ಜ್ಯೋತಿಯಂತೆ ಬೆಳಗಿದರು. ಮೌಢ್ಯ ನಿವಾರಣೆಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದರು ಎಂದು ಸ್ಮರಿಸಿದರು.

ಸಮಾಜಕ್ಕೆ ಪ್ರತಿಯೊಬ್ಬರೂ ಉತ್ತಮ ಕೊಡುಗೆ ನೀಡಬೇಕು. ಸಮಾಜದ ಒಳಿತಿಗಾಗಿ ಜೀವನ ಮುಡಿಪಾಗಿಟ್ಟವರನ್ನು ಬೆಂಬಲಿಸ ಬೇಕು. ಸಮಾಜದಲ್ಲಿ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ವಿಮರ್ಶೆ ಹಾಗೂ ನಿಂದನೆಗಳು ಎದುರಾಗುವುದು ಸಹಜ. ನಿಂದಕರ ಮಾತಿಗೆ ಬೆಲೆ ನೀಡದೆ, ಸಮಾಜ ಸೇವೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕರ್ನಾಟಕ ಪ್ರತಿಧ್ವನಿ ವೇದಿಕೆಯ ಅಧ್ಯಕ್ಷ ಪ್ರತಿಧ್ವನಿ ಪ್ರಸಾದ್ ಮಾತನಾಡಿ, ಶ್ರೀ ಚಿದಾನಂದ ಸ್ವಾಮೀಜಿ ಅತ್ಯಂತ ಶಿಸ್ತುಬದ್ಧ ಜೀವನ ನಡೆಸುತ್ತಿದ್ದರು. ಅನ್ಯಾಯವನ್ನು ಕಂಡಾಗ ಅದನ್ನು ಖಂಡಿಸುವ ಧೈರ್ಯ ಹೊಂದಿದ್ದರು. ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದ ಅವರು, ಹಲವಾರು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವ ಮೂಲಕ ಅವರ ಭವಿಷ್ಯ ರೂಪಿಸಲು ನೆರವಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಥಣಿಯ ಶ್ರೀ ಮೋಟಗಿ ಮಠದ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ, ಶ್ರೀ ಹೊಸಮಠದ ಪೀಠಾಧಿಪತಿ ಶ್ರೀ ಸಿದ್ದಬಸವ ಸ್ವಾಮೀಜಿ, ಶಾಸಕ ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ನವೀನ್ ಕೊಟ್ಟಿಗೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಸಮಾಜ ಸೇವಕ ಎ.ಸಿ. ಜಗದೀಶ್, ಬಸವ ಬಳಗ ಒಕ್ಕೂಟ ಮಾಜಿ ಅಧ್ಯಕ್ಷ ಎಂ. ಪ್ರದೀಪ್ ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಗರ ಪಾಲಿಕೆ ಘಟಕದ ಅಧ್ಯಕ್ಷ ಕೆ.ಎಸ್. ಪ್ರಕಾಶ್, ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷ ಕಾನ್ಯ ಶಿವಮೂರ್ತಿ, ಕರ್ನಾಟಕ ಪ್ರತಿಧ್ವನಿ ವೇದಿಕೆ ಜಿಲ್ಲಾಧ್ಯಕ್ಷ ಪ್ರತಿಧ್ವನಿ ತ್ರಿನೇಶ್, ಶಿಕ್ಷಕ ಬಿ.ಎಂ. ಪರಮೇಶ್ ಇದ್ದರು.