

ಬಸವಕಲ್ಯಾಣ: ಭಾರತೀಯ ಪರಂಪರೆ ಮತ್ತು ಸಂಸ್ಕೃತಿ ಅತ್ಯಂತ ಶ್ರೇಷ್ಠ ಎಂದು ಪ್ರತಿಪಾದಿಸುವ ಶ್ರೇಷ್ಠ ಲೇಖಕ ಡಾ.ಎಸ್.ಎಲ್. ಭೈರಪ್ಪ ಅವರ ಆತ್ಮಚರಿತ್ರೆ ಓದಬೇಕು. ಮಹಾನ್ ಕಾದಂಬರಿಕಾರ, ವಿಮರ್ಶಕರಾಗಿರುವ ಅವರ ಜೀವನವೇ ಮೌಲಿಕ ಸಂದೇಶವಾಗಿದೆ ಎಂದು ಹಿರಿಯ ಸಾಹಿತಿ ನಾಡೋಜ ಡಾ.ಮನು ಬಳಿಗಾರ ಬಣ್ಣಿಸಿದರು.
ಹಾರಕೂಡದ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀ ಗುರುಲಿಂಗ ಶಿವಾಚಾರ್ಯರ ೫೫ನೇ ಪುಣ್ಯ ಸ್ಮರಣೋತ್ಸವ ಹಾಗೂ ೩೮ನೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆ, ಗ್ರಂಥ ಬಿಡುಗಡೆ ಹಾಗೂ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.
ಅಮೆರಿಕದ ಬೃಹತ್ ಸಭಾಂಗಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭೈರಪ್ಪ ಭಾಷಣ ಕೇಳಲು ಜನ ಕಿಕ್ಕಿರಿದು ಸೇರಿದ್ದರು. ಸಾಹಿತ್ಯದಿಂದಲೇ ಇಷ್ಟು ದೊಡ್ಡವರಾಗಬಲ್ಲ, ಹೆಸರು-ಕೀರ್ತಿ ಗಳಿಸಬಲ್ಲ ಎಂಬುದಕ್ಕೆ ಯುವಕರು, ಸಾಹಿತಿ, ಕವಿಗಳು ಭೈರಪ್ಪ ಅವರನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜ್ಞಾನ ಗಳಿಸಲು ಪರಿಶ್ರಮ ಬೇಕು ಎಂಬುದನ್ನು ಕೆಲಸ-ಕಾರ್ಯಗಳ ಮೂಲಕವೇ ಶಿಕ್ಷಕರು, ಪ್ರಾಧ್ಯಾಪಕರಿಗೆ ಭೈರಪ್ಪ ತೋರಿಸಿಕೊಟ್ಟಿದ್ದಾರೆ. ಓದು, ಅಧ್ಯಯನ ಅವರ ಹವ್ಯಾಸ. ೯೦ ವರ್ಷ ದಾಟಿದರೂ ಎಲ್ಲವನ್ನು ತಿಳಿದುಕೊಳ್ಳಬೇಕು. ನೋಡಬೇಕು ಎಂಬ ಅವರ ಜ್ಞಾನದ ಹಸಿವು ನೀಗಿಲ್ಲ. ಕೌಟುಂಬಿಕ, ಮಾನವೀಯ ಸಂಬಂಧಗಳ ಸೂಕ್ಷ್ಮತೆ ತಿಳಿಯಲು ಅವರ ಕಾದಂಬರಿಗಳನ್ನು ಓದಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ. ಭಾಸ್ಕರ್ ಮಾತನಾಡಿ, ಹಾರಕೂಡ ಸಮನ್ವತೆಯ ಮಠ, ಅನ್ನ ದಾಸೋಹದ ಕೇಂದ್ರವಾಗಿದೆ. ಸಾಂಸ್ಕೃತಿಕ ಕ್ಷೇತ್ರಕ್ಕೆ ಹಾರಕೂಡ ಶ್ರೀಗಳ ಕೊಡುಗೆ ಮತ್ತು ಸಮಾಜಮುಖಿ ಕಾರ್ಯ ಶ್ಲಾಘನೀಯ. ನಾಡಿನ ಪ್ರಗತಿಯಲ್ಲಿ ಮಠ-ಮಾನ್ಯಗಳ ಕೊಡುಗೆ ದೊಡ್ಡದು. ಅಕ್ಷರ ಕ್ರಾಂತಿಗೆ ಮಠ-ಮಾನ್ಯಗಳು ಹೆಚ್ಚು ಗಮನಹರಿಸಿದ್ದರಿಂದ ಶೋಷಿತರು, ಆರ್ಥಿಕ ದುರ್ಬಲರ ಶಿಕ್ಷಣಕ್ಕೆ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಹಾರಕೂಡ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರಿಂದ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ ಸ್ವೀಕರಿಸಿದ ಡಾ.ಎಸ್.ಎಲ್. ಭೈರಪ್ಪ ಅವರು ಜೀವನದ ಅನುಭವಗಳನ್ನು ಹಂಚಿಕೊಂಡರು.
ಹಾರಕೂಡ ಶ್ರೀ ಬರೆದ ಚನ್ನಶ್ರೀ ವಾಣಿ ಮತ್ತು ಮೈಸೂರಿನ ರಾಜಶೇಖರ ಜಮದಂಡಿ ರಚಿತ ಶರಣರು ಸ್ಮರಿಸಿದ ಮಹಾಪುರುಷರು ಗ್ರಂಥಗಳನ್ನು ಹಿರಿಯ ಸಾಹಿತಿ ಧಾರವಾಡದ ಡಾ.ಸಂಗಮೇಶ ಸವದತ್ತಿಮಠ ಬಿಡುಗಡೆ ಮಾಡಿದರು. ಮೈಸೂರು ಲೇಖಕಿ ಸಹನಾ ವಿಜಯಕುಮಾರ ಅವರು ಭೈರಪ್ಪ ಜೀವನ ಮೌಲ್ಯಗಳ ಕುರಿತು ಮಾತನಾಡಿದರು.
ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ, ಪ್ರಮುಖರಾದ ಶಿವರಾಜ ನರಶೆಟ್ಟಿ, ಮಲ್ಲಿನಾಥ ಹಿರೇಮಠ, ಸಂತೋಷ ಕಲ್ಯಾಣಿ, ಜಗನ್ನಾಥ ಮಜಗೆ, ಶಿವಾನಂದ ಪಾಟೀಲ್ ಅಷ್ಟಗಿ, ಜಗನ್ನಾಥ ಪತಂಗೆ, ಸಂತೋಷ ಪಾಟೀಲ್, ಮಲ್ಲಿಕಾರ್ಜುನ ನಂದಿ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ನವಲಿಂಗ ಪಾಟೀಲ್ ಇತರರಿದ್ದರು.
ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಸುಭಾಷ ಮುರುಡ ಸ್ವಾಗತಿಸಿದರು. ಅಂಬರಾಯ ಉಗಾಜಿ ನಿರೂಪಣೆ ಮಾಡಿದರು. ಬಾಗಲಕೋಟೆಯ ಸಿದ್ರಾಮಯ್ಯ ಸ್ವಾಮಿ ಗೋರ್ಟಾ ಸಂಗೀತ ಸೇವೆ ಸಲ್ಲಿಸಿದರು. ಜನಾರ್ಧನ ವಾಘಮಾರೆ, ನವಲಿಂಗ ಪಾಟೀಲ್ ಸಾಥ್ ನೀಡಿದರು.
ಡಾ.ಎಸ್.ಎಲ್. ಭೈರಪ್ಪ ರಚಿಸಿದ ಮೌಲಿಕ ಕಾದಂಬರಿಗಳು ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಲ್ಲದೆ ದೇಶದ ೨೦ ಭಾಷೆಗಳಲ್ಲಿ ಅನುವಾದ ಹಾಗೂ ಮರುಮುದ್ರಣ ಕಂಡಿವೆ. ಚಲನಚಿತ್ರ ಮತ್ತು ಟಿವಿ ಧಾರಾವಾಹಿಗಳಾಗಿವೆ. ಶ್ರೇಷ್ಠ ಸಾಹಿತಿ, ಚಿಂತಕ, ಪ್ರಖರ ವಾಗ್ಮಿ, ವಿಮರ್ಶಕ, ಕಾದಂಬರಿಕಾರರಾಗಿರುವ ಅವರ ಅಪ್ರತಿಮ ಸಾಧನೆ ಪರಿಗಣಿಸಿ ಹಾರಕೂಡ ಸಂಸ್ಥಾನ ಹಿರೇಮಠದಿಂದ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
| ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಹಾರಕೂಡ
ನನ್ನ ಬರಹ ಜನಮನ್ನಣೆ ಪಡೆಯುವುದರ ಜತೆಗೆ ಅಸಂಖ್ಯ ಓದುಗರಿಗೆ ತೃಪ್ತಿ ನೀಡಿದೆ. ಇದಕ್ಕಿಂತ ಹೆಚ್ಚೇನೂ ಬಯಸುವುದಿಲ್ಲ. ವಿಶ್ವದ ಎಲ್ಲ ದೇಶಗಳನ್ನು ನೋಡಿದ್ದು ಜ್ಞಾನ ವೃದ್ಧಿಗೆ ಕಾರಣವಾಯಿತು. ನಮ್ಮ ಬರವಣಿಗೆ ಮನೆ, ನಮ್ಮೂರಿಗೆ ಸೀಮಿತವಾಗದೆ ಇಡೀ ದೇಶಕ್ಕೆ ನಮ್ಮದು ಎಂದನಿಸಬೇಕು.
| ಡಾ.ಎಸ್.ಎಲ್.ಭೈರಪ್ಪ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ
ಸಾಹಿತ್ಯ, ಸಂಸ್ಕೃತಿ, ದಾಸೋಹ ಹೀಗೆ ಹಲವು ಕ್ಷೇತ್ರಗಳಲ್ಲಿ ಹಾರಕೂಡ ಶ್ರೀಮಠದ ಕೊಡುಗೆ ಅನನ್ಯ. ಡಾ.ಎಸ್.ಎಲ್. ಭೈರಪ್ಪ ಸೇವೆ ಗುರುತಿಸಿ ಹಾರಕೂಡ ಮಠದ ಪ್ರತಿಷ್ಠಿತ ರಾಜ್ಯಮಟ್ಟದ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಅತೀವ ಸಂತಸ ತಂದಿದೆ.
| ನಾಡೋಜ ಡಾ.ಮನು ಬಳಿಗಾರ
ಸರ್ವದರ್ಮ ಸಮನ್ವತೆ ಎತ್ತಿ ಹಿಡಿದ ಮಠ ಹಾರಕೂಡ. ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ ಹಾಗೂ ಧಾರ್ಮಿಕವಾಗಿ ತನ್ನದೇ ಆದ ಕೊಡುಗೆ ನೀಡಿದ ಕಲ್ಯಾಣ ಕರ್ನಾಟಕ ಮಠ ಎಂಬುದನ್ನು ನಾವೆಲ್ಲರೂ ಒಪ್ಪುತ್ತೇವೆ. ಸಾಹಿತಿ, ಚಿಂತಕರಿಗೆ ವೇದಿಕೆ ಕಲ್ಪಿಸಿಕೊಡುವ ಜತೆಗೆ ಪುಸ್ತಕಗಳನ್ನು ಪ್ರಕಟಿಸುತ್ತ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಪುಸ್ತಕ ಸಂಸ್ಕೃತಿಯನ್ನು ಸಹ ಎತ್ತಿ ಹಿಡಿದಿದ್ದಾರೆ.
| ಡಾ.ಗವಿಸಿದ್ದಪ್ಪ ಪಾಟೀಲ್ ಸಾಹಿತಿ
ನೊಬೆಲ್ ಪ್ರಶಸ್ತಿಗೆ ಭೈರಪ್ಪ ಯೋಗ್ಯರು: ಅಖಂಡ ಭಾರತೀಯ ಸಂಸ್ಕೃತಿ ಹರಿಕಾರರಾಗಿರುವ ಎಸ್.ಎಲ್. ಭೈರಪ್ಪ ನೊಬೆಲ್ ಪ್ರಶಸ್ತಿಗೆ ಎಲ್ಲ ರೀತಿಯಿಂದಲೂ ಯೋಗ್ಯರು ಎಂದು ಹಿರಿಯ ಸಾಹಿತಿ ಧಾರವಾಡದ ಡಾ.ಸಂಗಮೇಶ ಸವದತ್ತಿಮಠ ಹೇಳಿದರು. ಜ್ಞಾನಪೀಠ ಪ್ರಶಸ್ತಿ ಕೊಡಲಿ ಅಥವಾ ಬಿಡಲಿ. ಅವೆಲ್ಲ ರಾಜಕೀಯ ಪ್ರಶಸ್ತಿಗಳು. ಹಾರಕೂಡ ಮಠದ ಪ್ರಶಸ್ತಿ ಜ್ಞಾನಪೀಠಕ್ಕಿಂತಲೂ ದೊಡ್ಡದು. ಆತ್ಮ ಪರಿಶುದ್ಧವಾಗಿರುವ ಭೈರಪ್ಪ ಅವರು ಪರಮಾತ್ಮ ಸ್ವರೂಪಿ. ಅಂಥ ದೊಡ್ಡ ಸಾಹಿತಿ ಹಳ್ಳಿಗೆ ಬಂದು ಶೋಭೆ ತಂದಿದ್ದಾರೆ. ಅವರ ನಿಷ್ಠೆ, ಪ್ರಾಮಾಣಿಕತೆ ಅಪರೂಪದ್ದು. ಅವರು ಅಳೆದು-ತೂಗಿ, ಮತ್ತೆ ಮತ್ತೆ ಪರಿಶೀಲಿಸಿ ಯೋಚಿಸಿ ಬರೆಯುತ್ತಾರೆ. ಹಾರಕೂಡ ಶ್ರೀಗಳು ಪ್ರಶಸ್ತಿ ವಿಷಯದಲ್ಲಿ ಯೋಗ್ಯರನ್ನೇ ಆಯ್ಕೆ ಮಾಡುತ್ತಾರೆ. ಸಮನ್ವತೆಯ ಮಠವಾಗಿರುವ ಹಾರಕೂಡ ೩೦ ವರ್ಷಗಳಿಂದ ಎತ್ತರೆತ್ತಕ್ಕೆ ಬೆಳೆಯುತ್ತಿದೆ. ಇದಕ್ಕೆ ಶ್ರೀಗಳ ಅಧ್ಯಾತ್ಮ ಶಕ್ತಿಯೇ ಕಾರಣ. ಭಾರತೀಯ ಸಂಸ್ಕೃತಿ, ಅಧ್ಯಾತ್ಮ ಶ್ರೀಮಂತಿಕೆ ಬೆಳೆಸುವ ಜತೆಗೆ ವಿಶಾಲ ತತ್ವದ ಮೇಲೆ ಮಠ ಬೆಳೆಯತ್ತಿದೆ ಎಂದರು.