ಶ್ರೀ ಚನ್ನಕೇಶವಸ್ವಾಮಿ ತೆಪ್ಪೋತ್ಸವ ಅದ್ದೂರಿ

ಬೇಲೂರು ಪಟ್ಟಣದ ವಿಷ್ಣು ಸಮುದ್ರ ಕಲ್ಯಾಣಿಯಲ್ಲಿ ಚನ್ನಕೇಶವಸ್ವಾಮಿ ತೆಪ್ಪೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ರಾತ್ರಿ ಅದ್ದೂರಿಯಾಗಿ ನೆರವೇರಿತು.
ಬೇಲೂರು ಪಟ್ಟಣದ ವಿಷ್ಣು ಸಮುದ್ರ ಕಲ್ಯಾಣಿಯಲ್ಲಿ ಚನ್ನಕೇಶವಸ್ವಾಮಿ ತೆಪ್ಪೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ರಾತ್ರಿ ಅದ್ದೂರಿಯಾಗಿ ನೆರವೇರಿತು.
Published on

ಬೇಲೂರು: ಶ್ರೀ ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ನಾಡಿನ ದಿವ್ಯ ರಥೋತ್ಸವ ನೆರವೇರಿದ ಮರುದಿನ ಸೋಮವಾರ ರಾತ್ರಿ ಪಟ್ಟಣದ ವಿಷ್ಣು ಸಮುದ್ರ ಕಲ್ಯಾಣಿಯಲ್ಲಿ ಶ್ರೀ ಚನ್ನಕೇಶವಸ್ವಾಮಿಯ ತೆಪ್ಪೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಪಟ್ಟಣ ಸಮೀಪದ ವಿಷ್ಣು ಸಮುದ್ರ ಕಲ್ಯಾಣಿಯಲ್ಲಿ ವಿವಿಧ ಪುಷ್ಪ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ತೆಪ್ಪದಲ್ಲಿ ನಿರ್ಮಿಸಿದ್ದ ಮಂಟಪದಲ್ಲಿ ಶ್ರೀ ಚನ್ನಕೇಶವಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಭಕ್ತರ ಸಮ್ಮುಖದಲ್ಲಿ ಸ್ವಾಮಿಗೆ ಪಂಚಾಮೃತ ಅಭಿಷೇಕ, ತೀರ್ಥಸ್ನಾನ, ಶೇಷತೀರ್ಥ ಪ್ರೋಕ್ಷಣೆ ನಡೆಸಿ ಪೂಜೆ ಸಲ್ಲಿಸಲಾಯಿತು.

ನಂತರ ಕಲ್ಯಾಣಿಯ ಗೋಪುರದ ಸುತ್ತ ದೇವರಿದ್ದ ತೆಪ್ಪವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿಸಿ ಉತ್ಸವ ಮೂರ್ತಿಯನ್ನು ಕಲ್ಯಾಣಿ ಮಧ್ಯದಲ್ಲಿರುವ ಕಲ್ಲಿನ ಮಂಟಪದಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸುವ ಮೂಲಕ ತೆಪ್ಪೋತ್ಸವವನ್ನು ನೆರವೇರಿಸಲಾಯಿತು. ಈ ಸಂದರ್ಭ ನೆರೆದಿದ್ದ ಸಾವಿರಾರು ಭಕ್ತರು ಗೋವಿಂದ ಗೋವಿಂದ ಎಂದು ನಾಮಸ್ಮರಣೆ ಮಾಡುತ್ತ ಸ್ವಾಮಿಗೆ ಪೂಜೆ ಸಲ್ಲಿಸಿದರು. ಚನ್ನಕೆಶವಸ್ವಾಮಿ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಇಒ ಯೋಗಿಶ್, ಸೇವಾರ್ಥದಾರ ರಮೇಶ್ ಸೇರಿದಂತೆ ಅರ್ಚಕರು ಮತ್ತು ಭಕ್ತರು ಪಾಲ್ಗೊಂಡಿದ್ದರು.

ದೋಣಿಗಳಲ್ಲಿ ತೆಪ್ಪೋತ್ಸವ: ಬೇಲೂರಿನ ವಿಷ್ಣು ಸಮುದ್ರ ಕಲ್ಯಾಣಿಯಲ್ಲಿ ನಡೆಯುವ ಚನ್ನಕೇಶವಸ್ವಾಮಿ ತೆಪ್ಪೋತ್ಸವವು ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಪ್ರತಿ ವರ್ಷ ವಿಷ್ಣು ಸಮುದ್ರ ಕೆರೆಯ ಉತ್ತರದ ತುದಿಯಲ್ಲಿ ಕಲ್ಯಾಣಿ(ಪುಷ್ಕರಣಿ) ನಿರ್ಮಿಸಿ ಮಾಡಲಾಗುತ್ತಿತ್ತು. ತೆಪ್ಪೋತ್ಸವದ ಅನುಕೂಲಕ್ಕಾಗಿ ವಸಂತ ಮಂಟಪ, ನಿವೇದನ ಮಂಟಪಗಳಿವೆ. ಎರಡು ದೋಣಿಗಳ ಮೂಲಕ ತೆಪ್ಪೋತ್ಸವ ನಡೆಯುತಿತ್ತು. ಆ ನಂತರದ ದಿನಗಳಲ್ಲಿ ತೆಪ್ಪೋತ್ಸವ ಸ್ಥಗಿತಗೊಂಡಿತು. ಆದರೆ ಈಗ ಮತ್ತೆ ಸುಮಾರು 5-6 ವರ್ಷಗಳಿಂದ ಭಕ್ತರ ಸಹಕಾರದಿಂದ ತೆಪ್ಪೋತ್ಸವ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net