

ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ (81) ಶುಕ್ರವಾರ ತಡರಾತ್ರಿ ಭೈರವೈಕ್ಯರಾದರು. ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಸಂಜೆ ಕೆಂಗೇರಿ ಮಠದ ಆವರಣದಲ್ಲಿ ‘ನಾಥ’ ಸಂಪ್ರದಾಯದಂತೆ ಶ್ರೀಗಳ ಅಂತ್ಯಸಂಸ್ಕಾರ ಮಾಡಲಾಯಿತು. ಮಠದ ಉತ್ತರಾಧಿಕಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಪಂಡಿತ್ ಭಾನುಪ್ರಕಾಶ್ ಗುರೂಜಿ, ಶ್ರೀಗಳ ಅಂತಿಮ ವಿಧಿವಿಧಾನ ನೆರವೇರಿಸಿದರು. ಇದಕ್ಕೂ ಮುನ್ನ ಮಠದ ಆವರಣದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮೈಸೂರಿನ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಿಎಂ ಡಿವಿ ಸದಾನಂದಗೌಡ ಸೇರಿ ವಿವಿಧ ರಾಜಕೀಯ ಮುಖಂಡರು ಹಾಗೂ ಹಲವು ಮಠದ ಸ್ವಾಮೀಜಿಗಳು ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದರು. ತಮಿಳುನಾಡು ಸೇರಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಎಚ್.ಸಿ. ಮಹದೇವಪ್ಪ, ಸಂಸದ ಬಸವರಾಜ ಬೊಮ್ಮಾಯಿ ಮುಂತಾದ ನಾಯಕರು ಸಂತಾಪ ಸೂಚಿಸಿದರು.
ಶ್ರೀಗಳು ಶ್ರೀಮಂತ ಕುಟುಂಬದವರು
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಹಳ್ಳಿಯೊಂದರಲ್ಲಿ ಜನಿಸಿದ ಚಂದ್ರಶೇಖರನಾಥ ಸ್ವಾಮೀಜಿ, ಬಿ.ಕಾಂ ಪದವಿ ಬಳಿಕ ಚಾರ್ಟರ್ಡ್ ಅಕೌಂಟೆಂಟ್ ಆಗಿ ವೃತ್ತಿ ಆರಂಭಿಸಿದ್ದರು. ಶ್ರೀಗಳು ಶ್ರೀಮಂತ ಕುಟುಂಬದ ಶ್ರೀಗಳು ಮನೆಯಲ್ಲಿ ಆಗಿನ ಕಾಲದಲ್ಲೇ ಬಸ್‌ಗಳಿದ್ದವು. ಆದರೆ, ಇದೆನಲ್ಲಾ ತ್ಯಜಿಸಿದ ಶ್ರೀಗಳು, ಸಾಮಾಜಿಕ ಸೇವೆಯಿಂದ ಪ್ರೇರಣೆಯಾಗಿ ಆರಂಭದಲ್ಲಿ ಆದಿಚುಂಚನಗಿರಿ ಮಠದಲ್ಲಿ ಸೇವೆ ಸಲ್ಲಿಸಿದ್ದರು. ಆಳವಾಗಿ ವೇದವ್ಯಾಸ ಅಭ್ಯಾಸ ಮಾಡಿದ್ದರು. 1974ರಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಮೊದಲ ಪೀಠಾಧಿಪತಿಯಾದರು. ಅಂದಿನಿಂದ ಇಂದಿನವರೆಗೂ ಶ್ರೀಗಳು ನೇತೃತ್ವದಲ್ಲಿ ಮಠ ಕಾರ್ಯನಿರ್ವಹಿಸುತ್ತಿತ್ತು. ಇದು ಹಳೆಯ ಮಠವಾಗಿದೆ. ಪೀಠಾಧಿಪತಿಯಾದಗಿನಿಂದಲೂ ಸಮಾಜದ ಒಳತಿಗಾಗಿ ಶ್ರಮಿಸಿದ್ದರು. ಶಿಕ್ಷಣ ಮತ್ತು ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ರೈತರ ಪರ, ಅನ್ಯಾಯದ ವಿರುದ್ಧ ದನಿ ಎತ್ತಿದ್ದರು. ಒಕ್ಕಲಿಗರ ಸಮುದಾಯ ಸೇರಿ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿದ್ದರು. ದಿನದಿಂದ ದಿನಕ್ಕೆ ತಮ್ಮ ಆರೋಗ್ಯ ಸಮಸ್ಯೆಯ ಗಂಭೀರತೆ ಅರಿತ ಚಂದ್ರಶೇಖರನಾಥ ಸ್ವಾಮೀಜಿ, ಮಠವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕೆಂಬ ಆಶಯದೊಂದಿಗೆ ಡಿಸೆಂಬರ್‌ನಲ್ಲೇ ಮಠಕ್ಕೆ ನಿಶ್ಚಲಾನಂದನಾಥ ಶ್ರೀಗಳನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದರು.
ಎಚ್‌ಡಿಡಿ ಕಣ್ಣೀರು
ಅಂತಿಮ ದರ್ಶನ ಪಡೆಯುತ್ತಿದ್ದ ಸಂದರ್ಭದಲ್ಲಿ ಶ್ರೀಗಳನ್ನು ನೋಡುತ್ತಿದ್ದಂತೆ ಮಾಜಿ ಪ್ರಧಾನಿ ಎಚ್‌ಡಿಡಿ ಕಣ್ಣೀರು ಹಾಕಿದರು. ಶ್ರೀಗಳ ಪಾರ್ಥೀವಶರೀರದ ಪಕ್ಕದಲ್ಲೇ ಕೆಲಹೊತ್ತು ಕುಳಿತಿದ್ದರು. ಬಳಿಕ, ಎಚ್‌ಡಿಡಿ ಮತ್ತು ಡಿಕೆಶಿ ಅಕ್ಕಪಕ್ಕದಲ್ಲಿ ಕುಳಿತು ಶ್ರೀಗಳ ಅಂತಿಮ ವಿಧಿವಿಧಾನ ವೀಕ್ಷಿಸಿದರು. ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಆದಿಚಂಚನಗಿರಿ ಶ್ರೀಗಳು, ಸುತ್ತೂರು ಶ್ರೀಗಳು, ಕಾಳಿಮಠದ ಶ್ರೀಗಳು ಸೇರಿ ವಿವಿಧ ಮಠದ ಸ್ವಾಮೀಜಿಗಳು ಸೇರಿ ಸಮುದಾಯದ ಅಪಾರ ಭಕ್ತರ ಗಣ ಉಪಸ್ಥಿತಿ ಇತ್ತು.
ಆಧ್ಯಾತ್ಮ ಲೋಕದಲ್ಲಿ ಮಹೋನ್ನತ ಸಾಧನೆ ಮಾಡಿದ್ದ ಶ್ರೀಗಳು, ಸಮಾಜ ಸೇವೆ ಮತ್ತು ಧರ್ಮದ ಕೈಂಕರ್ಯದಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಶ್ರೀಗಳು ಭೈರವೈಕ್ಯರಾದ ಸುದ್ದಿ ತಿಳಿದು ಬಹಳ ದುಃಖವಾಯಿತು. ಪರಮಪೂಜ್ಯರ ಆತ್ಮಕ್ಕೆ ಚಿರಶಾಂತಿ ಸಿಗುವಂತಾಗಲಿ.
ಎಚ್.ಡಿ,ಕುಮಾರಸ್ವಾಮಿ,ಕೇಂದ್ರ ಸಚಿವ
ಸ್ವಾಮೀಜಿಯವರು ಸಮುದಾಯದ ಬೆಳವಣಿಗೆಗೆ ನೀಡಿದ್ದ ಕೊಡುಗೆ ಅಪಾರವಾದದ್ದು. ಶಿಕ್ಷಣದಿಂದ ಮಾತ್ರ ಸಮುದಾಯದ ಪ್ರಗತಿ ಸಾಧ್ಯವೆಂದು ನಂಬಿದ್ದರು. ತಾವೇ ಕೃಷಿ ಮಾಡಿ ದಾಸೋಹ ಮಾಡುತ್ತಿದ್ದರು. ಅವರ ಅಗಲಿಕೆ ಇಡೀ ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ.
ಡಿ.ಕೆ.ಶಿವಕುಮಾರ್, ಡಿಸಿಎಂ
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇರಿ ಮುಂತಾದ ಕ್ಷೇತ್ರಗಳಲ್ಲಿ ನಿಷ್ಕಾಮ ಸೇವೆ ಸಲ್ಲಿಸುವ ಮೂಲಕ ಶ್ರೀಗಳು ಜನಮನದಲ್ಲಿ ನೆಲೆಯಾಗಿದ್ದರು.ಸಮಾಜದ ಮುನ್ನಡೆ, ಅಭಿವೃದ್ಧಿಗಾಗಿ ಮಾರ್ಗದರ್ಶನ ಮಾಡುತ್ತಿದ್ದರು. ಸನಾತರ ಸಂಸ್ಕೃತಿ, ಪರಂಪರೆಗಳ ರಕ್ಷಕರಾಗಿ ಜನತೆಯ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ತಮ್ಮ ಬೋಧನೆ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದರು.
ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ
ಶ್ರೀಗಳು ಹಿಂದುತ್ವ ವಿಚಾರದಲ್ಲಿ ಅವರದ್ದೇ ಆದ ನಿಲುವು ಇಟ್ಟಿಕೊಂಡಿದ್ದರು. ಧಾರ್ಮಿಕ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯ ಮಾಡಿದ್ದರು. ಅಪಾರ ಸಂಖ್ಯೆಯ ಭಕ್ತಾದಿಗಳನ್ನು ಹೊಂದಿದ್ದರು. ಶ್ರೀಗಳ ಅಗಲಿಕೆ ಇಡೀ ಸಮುದಾಯಕ್ಕೆ ನಷ್ಟವಾಗಿದೆ.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಮತ್ತು ಶಾಸಕ
ಬಡವರು, ಸಾಮಾನ್ಯರ ಮನೆಯಲ್ಲಿ ಶ್ರೀಗಳು ಸಂಸ್ಕಾರ ಮಾಡಿದ್ದರು. ಈ ಮೂಲಕ ಸಾಮಾನ್ಯರು ಸಹ ಬದುಕನ್ನು ರೂಪಿಸಬಹುದು ಎಂದು ತೋರಿಸಿಕೊಟ್ಟಿದ್ದರು. ದೂರದರಷ್ಟಿ, ನಿಷ್ಠುರ ಸಂದೇಶ, ಸಮಾಜದ ಹಕ್ಕನ್ನು ಪ್ರಶ್ನಿಸುತ್ತಿದ್ದ ಅಪರೂಪದ ಮಹಾನ್ ವ್ಯಕ್ತಿ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ.
ವಿ.ಸೋಮಣ್ಣ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ.
ಹಿಂದು ಧರ್ಮದ ಬಗ್ಗೆ ಅನ್ಯಾಯವಾದಗ ಚಂದ್ರಶೇಖರನಾಥ ಸ್ವಾಮೀಜಿ ಧ್ವನಿ ಎತ್ತುತ್ತಿದ್ದರು. ಬಹಳಷ್ಟು ಸಮಾಜ ಸೇವೆ ಮಾಡಿದ್ದರು. ಇತ್ತೀಚಿಗಷ್ಟೇ ಅವರನ್ನು ಭೇಟಿ ಮಾಡಿದ್ದೆ. ಆಗ ಶ್ರೀಗಳು ಲವಲವಿಕೆಯಿಂದ ಇದ್ದರು. ಭಗವಂತ ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ.
ಆರ್.ಅಶೋಕ್. ವಿಪಕ್ಷ ನಾಯಕ
ಶ್ರೀಗಳು ಶ್ರೀಮಂತ ಕುಟುಂಬದಿಂದ ಬಂದವರು. ಅದನ್ನೆಲ್ಲಾ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದರು. ಮಠವನ್ನು ಕಟ್ಟಿ ಬೆಳೆಸಿದ್ದಾರೆ. ಸರಳತೆ ಹೊಂದಿದ್ದ ಶ್ರೀಗಳು ಸಾತ್ವಿಕ ಸ್ವಭಾವದವರು. ಅವರ ಅಗಲಿಕೆ ಮನಸ್ಸಿಗೆ ನೋವು ತಂದಿದೆ.
ಡಾ.ಸಿ.ಎನ್.ಮಂಜುನಾಥ್, ಸಂಸದ
ಹಿಂದು ಧರ್ಮವನ್ನು ಸತತವಾಗಿ ಪಸರಿಸುವ ಕಾರ್ಯವನ್ನು ಶ್ರೀಗಳು ಮಾಡಿದ್ದರು. ಮಠದ ಜೊತೆ ನಾನು ಒಳನಾಟ ಇಟ್ಟುಕೊಂಡಿದ್ದೆ. ನಾನೊಬ್ಬ ಜಗದ್ಗುರು ಅಂತಾ ಎಂದಿಗೂ ಹೇಳುತ್ತಿರಲಿಲ್ಲ. ಪ್ರತಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು.ಸಮಾಜಕ್ಕೆ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ಸ್ವಂತ ಜಾಗವನ್ನು ಮಠಕ್ಕೆ ನೀಡಿದ್ದರು.
ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಶಾಸಕ
ಶ್ರೀಗಳ ಜೀವನ ಸರಳವಾಗಿತ್ತು. ಚುಂಚನಗಿರಿಯಿಂದ ಜೀವನವನ್ನು ಶುರು ಮಾಡಿದ್ದರು. ಒಕ್ಕಲಿಗ ಪೀಠಾಧ್ಯಕ್ಷರಾಗಿ ಅವರ ಜೀವನ ಕೊನೆಗೊಂಡಿದೆ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಅಂಗಸಂಸ್ಥೆಯನ್ನಾಗಿ ಮಾಡಬೇಕೆಂದು ಶ್ರೀಗಳು ಆಸೆ ಇಟ್ಟುಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.
ಚಲುವರಾಯಸ್ವಾಮಿ, ಸಚಿವ.