

ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದ ಶ್ರೀ ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಶುಕ್ರವಾರ ಕಲಶೋತ್ಸವ ಅದ್ದೂರಿಯಾಗಿ ಜರುಗಿತು.
ಇದನ್ನೂ ಓದಿ: ವಾಲ್ಮೀಕಿ ಜಾತ್ರೆಗೆ 51 ಕ್ವಿಂಟಾಲ್ ಅಕ್ಕಿ ದೇಣಿಗೆ
ಪೀಠಾಧಿಪತಿ ಶ್ರೀ ಬೂದಿಬಸವ ಶಿವಾಚಾರ್ಯರ ನೇತೃತ್ವದಲ್ಲಿ ಬೆಳಗ್ಗೆ ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಿದವು. ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾರಥಕ್ಕೆ ನೂತನ ಕಲಶ ಅಳವಡಿಸಲಾಯಿತು.
ಶ್ರೀ ಸಾಲಿ ಬೂದೆಯ್ಯಸ್ವಾಮಿ, ಸಾಲಿ ದೊಡ್ಡ ಬಸ್ಸಯ್ಯ ಸ್ವಾಮಿ, ಶ್ರೀ ಶರಣಯ್ಯಸ್ವಾಮಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕೈಂಕಾರ್ಯಗಳು ಜರುಗಿದವು. ತೇರಿನ ಕಲಶ ಮತ್ತು ಪಲ್ಲಕ್ಕಿ ಉತ್ಸವ ಊರೊಳಗಿನ ಶ್ರೀಮಠದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬೂದೆಯ್ಯಸ್ವಾಮಿ ಹೇಮನೂರು ನೇತೃತ್ವದಲ್ಲಿ ಪುರವಂತಿಕೆ, ಸಕಲ ವಾದ್ಯಮೇಳ, ಮಹಿಳೆಯರ ಕುಂಭಕಳಸ ಗಮನ ಸೆಳೆಯಿತು. ಸುಲ್ತಾನಪುರ ಬೃಹನ್ಮಠದ ಶ್ರೀ ಶಂಭು ಸೋಮನಾಥ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು.
ಇಂದಿನ ಕಾರ್ಯಕ್ರಮ: ಜಾತ್ರೆ ನಿಮಿತ್ತ ಫೆ.8ರಂದು ಬೆಳಗ್ಗೆ 7ಗಂಟೆಗೆ ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ಮಹಾಮಂಗಳಾರತಿ ಜರುಗಲಿದೆ. ನಂತರ ಕಡುಬಿನ ಕಾಳಗ ಕಾರ್ಯಕ್ರಮ ನಡೆಯಲಿದ್ದು, ನವಲಕಲ್ ಬೃಹನ್ಮಠದ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯರು ನೇತೃತ್ವ ವಹಿಸುವರು. ಶ್ರೀ ಬೂದಿಬಸವ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ರಾತ್ರಿ 10ಗಂಟೆಗೆ ಸಾವಿರಾರು ಭಕ್ತರ ನಡುವೆ ಚತುರ್ಥಿ ಉಚ್ಛಾಯ ಕಾರ್ಯಕ್ರಮ ಜರುಗಲಿದೆ.