

ಭಟ್ಕಳ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತಾರಂಭ ಜುಲೈ 3 ರಿಂದ ಆ. 31ರವರೆಗೆ ಧರ್ಮಸ್ಥಳ ಉಜಿರೆಯ ದೇವರಗುಡ್ಡದಲ್ಲಿ ನಡೆಯಲಿದೆ ಎಂದು ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ಗುರುಮಠದ ಅಧ್ಯಕ್ಷ ಕೃಷ್ಣಾ ನಾಯ್ಕ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ನಮ್ಮ ಸಮಾಜದವರಿಗೆ ಚಾತುರ್ಮಾಸ್ಯ ವ್ರತದ ಅರಿವು ಇರಲಿಲ್ಲ. ಕಳೆದ ಮೂರು ವರ್ಷಗಳಿಂದ ಸಮಾಜದಲ್ಲಿ ಧರ್ಮ ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಉಜಿರೆಯ ದೇವರಗುಡ್ಡದಲ್ಲಿ ಚಾತುರ್ಮಾಸ್ಯ ವ್ರತವನ್ನು ಆರಂಭಿಸಿದ್ದರು.
ಚಾತುರ್ಮಾಸ್ಯದಲ್ಲಿ ಸ್ವಾಮೀಜಿಗಳು ಮೌನ ವ್ರತವನ್ನು ಆಚರಿಸುತ್ತಿದ್ದು, ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯ ತನಕ ಮೌನಾಚರಣೆಯ ಪ್ರಯುಕ್ತ ಸ್ವಾಮೀಜಿಗಳು ಭಕ್ತರ ದರ್ಶನಕ್ಕೆ ಲಭ್ಯವಿರುವುದಿಲ್ಲ. ಸಂಜೆ 6 ಗಂಟೆಯ ನಂತರ ಹಾಗೂ ಪ್ರತಿ ಭಾನುವಾರ ದಿನವಿಡೀ ಸ್ವಾಮೀಜಿಗಳು ಭಕ್ತರ ದರ್ಶನಕ್ಕೆ ಲಭ್ಯರಿರುತ್ತಾರೆ. ತಾಲೂಕಿನ ಸಮಾಜದ ಬಂಧುಗಳು ಈ ಚಾತುರ್ಮಾಸ್ಯ ವ್ರತಾಚರಣೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ, ಚಾತುರ್ಮಾಸ್ಯ ವ್ರತ ಸಂಕಲ್ಪ ಪ್ರಯುಕ್ತ ರಾಮತಾರಕ ಯಜ್ಞ ಹಾಗೂ ವೈದಿಕ ವಿಧಿವಿಧಾನಗಳು ಜರುಗುವವು. ಜು. 3ರಂದು ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಸಾನ್ನಿದ್ಯ ವಹಿಸುವರು. ಮೀನುಗಾರಿಕೆ, ಬಂದರು ಸಚಿವ ಮಂಕಾಳ ವೈದ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಅನೇಕ ಗಣ್ಯರು ಉಪಸ್ಥಿತರಿರುವರು ಎಂದರು.
ಶ್ರೀ ಗುರುಮಠದ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಕೆ.ಆರ್. ನಾಯ್ಕ, ಗಿರೀಶ ನಾಯ್ಕ, ವಿಠ್ಠಲ್ ನಾಯ್ಕ, ಮಂಜುನಾಥ ನಾಯ್ಕ, ಕೃಷ್ಣ ನಾಯ್ಕ, ಕುಕನೀರ್, ವೆಂಕಟೇಶ ನಾಯ್ಕ, ವೆಂಕಟ್ರಮಣ ನಾಯ್ಕ, ಸುರೇಶ ನಾಯ್ಕ, ದೇವಾ ನಾಯ್ಕ, ಮೋಹನ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.