

ಗೋಕರ್ಣ: ಈ ಭಾಗದ ಗ್ರಾಮದೇವತೆ ಎಂದು ಆರಾಧಿಸುವ ಪುರಾಣ ಖ್ಯಾತ ಶ್ರೀ ಭದ್ರಕಾಳಿ ಬಂಡಿಹಬ್ಬದ ಪ್ರಯುಕ್ತ ಶನಿವಾರ ಸಂಜೆ ವಿಜೃಂಭಣೆಯಿಂದ ಬಂಡಿತೇರು ಉತ್ಸವ ನಡೆಯಿತು.
ಭದ್ರಕಾಳಿ ಮಂದಿರದಿಂದ ವಿಶೇಷ ಮಂಗಲವಾದ್ಯಗಳು ಮತ್ತು ಭವ್ಯ ಮೆರವಣಿಗೆಯಲ್ಲಿ ಮಹಾಬಲೇಶ್ವರ ಮಂದಿರಕ್ಕೆ ಮೊದಲು ಭೇಟಿಯಿತ್ತ ಶ್ರೀದೇವರ ಕಳಸ ಸವಾರಿ ನಂತರ ರಥಬೀದಿಯ ಕಳಸದ ಮನೆಗೆ ಆಗಮಿಸಿ ವಿಶೇಷ ಸೇವೆ ಸ್ವೀಕರಿಸಿತು.
ಬಳಿಕ ಜರುಗಿದ ಬಂಡಿತೇರು ಉತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿದ್ದ ಭಕ್ತರು ತೇರು ಎಳೆದು ಕೃತಾರ್ಥರಾದರು. ಮಳೆಯ ನಡುವೆಯೇ ನಡೆದ ತೇರು ಉತ್ಸವ ರಥಬೀದಿಯಿಂದ ಭದ್ರಕಾಳಿ ಮಂದಿರದವರೆಗೆ ಸಂಚರಿಸಿ ಸಂಪನ್ನವಾಯಿತು.
ಸುಮಂಗಲಿಯರು ತಲೆಯ ಮೇಲೆ ಫಲಸಹಿತದ ಕಲಶ ಹೊತ್ತು ತೇರಿನ ಉತ್ಸವದ ಮುಂದೆ ಸಾಗಿ ತಮ್ಮ ಹರಕೆಯನ್ನು ಶ್ರೀದೇವರಿಗೆ ಸಮರ್ಪಿಸಿದರು. ಬಂಡಿ ತೇರಿಗೆ ಬೆಳಗಿನಿಂದಲೇ ಭಕ್ತರು ಬಾಳೆಹಣ್ಣಿನ ಕೊನೆ, ಎಳೆಯ ತೆಂಗಿನ ಫಲ ಮುಂತಾದ ಬಗೆಯ ಬಗೆಯ ನೂರಾರು ಕಿಲೋ ಭಾರದ ಫಲಗಳನ್ನು ಅರ್ಪಿಸಿದರು.
ಸುರಿವ ಮಳೆಯಲ್ಲಿಯೇ 5 ಸಾವಿರಕ್ಕೂ ಹೆಚ್ಚಿನ ಭಕ್ತರು ತೇರಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಾನುವಾರ ನಡೆಯಲಿರುವ ಹರಕೆ ಸಮರ್ಪಣೆ ಕಾರ್ಯಕ್ರಮದೊಂದಿಗೆ ವಾರ್ಷಿಕ ಬಂಡಿಹಬ್ಬ ವಿದ್ಯುಕ್ತವಾಗಿ ಮಂಗಳವಾಗಲಿದೆ.