ಮತ್ತೆ ಹೋರಾಟ ಮಾಡುವುದಾಗಿ ಹೇಳಿದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ

basavajaya
Published on

ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ವಿಚಾರವಾಗಿ ಮತ್ತೆ ಹೋರಾಟ ಮಾಡುವುದಾಗಿ ಕೂಡಲಸಂಗ ಪಂಚಮಸಾಲಿ ಪೀಠದ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ನಮಗಿನ್ನು ರ್ತಾಕ ಅಂತ್ಯ ಸಿಕ್ಕಿಲ್ಲ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಮತ್ತೆ ಹೋರಾಟ ಮಾಡಲು ಚಿಂತನೆ ನಡೆಸಿದ್ದೇವೆ. ಶ್ರಾವಣ ಮಾಸದಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಿದ್ದೇವೆ ಎಂದರು.

ಬಜೆಟ್ ಅಧಿವೇಶನದ ನಂತರ ಸಭೆ ಕರೆದು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಕೂಡಲೆ ತಜ್ಞರ ಸಭೆ ಕರೆದು ಮೀಸಲಾತಿ ವಿಚಾರ ಇತ್ಯರ್ಥ ಮಾಡಬೇಕು. ನಮ್ಮ ಸಮುದಾಯಕ್ಕೆ ನಿರಾಸೆ ಮೂಡಿದೆ. 2ಎ ಮೀಸಲಾತಿ ವಿಚಾರ ಹೈಕೋರ್ಟ್​ನಲ್ಲಿದೆ. 2ಡಿ ಸುಪ್ರೀಂಕೋರ್ಟ್​ನಲ್ಲಿದೆ. ಈ ಎಲ್ಲವನ್ನೂ ಬಗೆಹರಿಸುವ ಶಕ್ತಿ ರಾಜ್ಯ ಸರ್ಕಾರಕ್ಕಿದೆ. ಸರ್ಕಾರ ಮನಸ್ಸು ಮಾಡಿ 2 ಎ ಮೀಸಲಾತಿ ನೀಡಬೇಕು. ಇಲ್ಲವಾದರೆ ಕೇಂದ್ರ ಮತ್ತು ರಾಜ್ಯ ಒಬಿಸಿ ಪಟ್ಟಿಯಲ್ಲಿ ಲಿಂಗಾಯತ ಸಮುದಾಯವನ್ನು ಸೇರಿಸಬೇಕು. ಲೋಕಸಭೆ ಚುನಾವಣೆ ಮುನ್ನವೇ ಘೊಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಪಂಚಮಸಾಲಿ ಸಮಾಜದ 12 ಶಾಸಕರಿದ್ದಾರೆ. ಅದರಲ್ಲಿ 5-6 ಜನರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದೇವೆ. ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ವಿನಯ ಕುಲಕರ್ಣಿ ಹಾಗೂ ವಿಜಯಾನಂದ ಕಾಸಪ್ಪ ಅವರಿಗೂ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net