ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಜ.6 ರಂದು ರಾಜ್ಯಾದ್ಯಂತ ತೆರೆಗೆ

BLY-3-3
ಬಳ್ಳಾರಿ ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಚಿತ್ರ ತಂಡದಿಂದ ದಿ.ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚಿತ್ರದ ನಾಯಕ ರಾಜೇಶ್ ಧ್ರುವ, ನಿರ್ಮಾಪಕ ವೆಂಕಟೇಶ್ವರ್ ರಾವ್, ಸಹ ನಿರ್ಮಾಪಕ ಬಿ.ವೀರನಗೌಡ ಹಾಗೂ ಕೆ.ಎಸ್.ರಾವ್, ಕರವೇ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಗಣಪತಿ ಭಟ್ ಮತ್ತಿತರರಿದ್ದರು.
Published on

ಬಳ್ಳಾರಿ :ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಕನ್ನಡ ಚಲನಚಿತ್ರ ಜ.6ರಂದು ರಾಜ್ಯಾದ್ಯಂತ 100 ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ ಎಂದು ಸಿನಿಮಾದ ನಿರ್ಮಾಪಕ ವೆಂಕಟೇಶ್ವರ್ ರಾವ್ ಹೇಳಿದರು.

ಛಾಯಾಚಿತ್ರಗ್ರಾಹಕನ ಜೀವನದಲ್ಲಿ ನಡೆಯಲಿರುವ ಘಟನೆಗಳ ಕುರಿತು ಸಿನಿಮಾದ ಮೂಲಕ ಪ್ರೇಕ್ಷಕರನ್ನು ತಲುಪಿಸುವ ಪ್ರಯತ್ನ ಇದಾಗಿದೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟ ರಾಜೇಶ್ ಧ್ರುವ ಕಿರುತೆರೆ ನಟರಾಗಿ ಹೆಸರು ಮಾಡಿದ್ದು, ಈಗ ಹಿರಿತೆರೆಗೆ ಬಡ್ತಿ ಪಡೆದಿದಿದ್ದಾರೆ. ಶ್ರೀಬಾಲಾಜಿ ಫೋಟೊ ಸ್ಟುಡಿಯೋ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದಾರೆ. ಅಲ್ಲದೆ ಆ ಸಿನಿಮಾವನ್ನು ಅವರೇ ನಿರ್ದೇಶನ ಮಾಡಿದ್ದಾರೆ ಎಂದರು.

ಉತ್ತರ ಕನ್ನಡದ ಹಳ್ಳಿಯೊಂದರ ಕಥೆ ಇದಾಗಿದ್ದು, ಇತ್ತಿಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಪ್ರಯೋಗಾತ್ಮಕ ಚಿತ್ರದ ಕಡೆ ಮುಖ ಮಾಡಿದೆ. ಅದರಲ್ಲಿ ಹಳ್ಳಿ ಸೊಗಡಿನ ಚಿತ್ರಗಳ ಸಂಖ್ಯೆ ಜಾಸ್ತಿಯಾಗಿವೆ. ಈಗ ಉತ್ತರ ಕನ್ನಡದ ಹಳ್ಳಿಯೊಂದರ ಕಥೆಯನ್ನು ರಾಜೇಶ್ ಹೇಳುತ್ತಿದ್ದಾರೆ. ಈ ಇಡೀ ಚಿತ್ರವನ್ನು ಶಿರಸಿ, ಯಲ್ಲಾಪುರ, ಹೊನ್ನಾವರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದ ವಿಶೇಷತೆ ಏನೆಂದರೆ ಚಿತ್ರಕ್ಕೆ ಬಳಸಿರುವ ಭಾಷೆ ಕೂಡ ಉತ್ತರಕನ್ನಡ ಭಾಗದ್ದು, ಶೇ.80 ರಷ್ಟು ಚಿತ್ರೀಕರಣ ಮಳೆ, ಹಸಿರುಮಯವಾದ ರಮಣೀಯ ಸ್ಥಳಗಳಲ್ಲಿ ಚಿತ್ರಿಕರಣ ಮಾಡಲಾಗಿದೆ ಎಂದು ತಿಳಿಸಿದರು.


ರಾಧಿಕಾ ಅಚ್ಯುತ್ ರಾವ್ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ರವಿ ಸಾಲಿಯಾನ್, ಸಂಪತ್ ಜೆ. ರಾಮ್, ಕಾಮಿಡಿ ಕಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರಾವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿಕಿರುತೆರೆ ನಟ ಶಿಶಿರ್ ಮತ್ತಿತರರು ನಟಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕಥೆ-ಚಿತ್ರಕಥೆ ಅಭಿಷೇಕ್ ಶಿರಸಿ, ಪೃಥ್ವಿಕಾಂತ ಅವರದ್ದಾಗಿದೆ. ಸಂಭಾಷಣೆಯನ್ನು ಅಜಿತ್ ಬೊಪ್ಪನಳ್ಳಿ ಬರೆದಿದ್ದಾರೆ. ಶ್ರೀರಾಮ್ ಗಂಧರ್ವ ಅವರ ಸಂಗೀತ, ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಅವರ ಸಾಹಿತ್ಯ ಚಿತ್ರಕ್ಕಿದೆ. ವೆಂಕಟೇಶ್ವರ್‌ರಾವ್ ನಿರ್ಮಾಪಕರಾಗಿದ್ದು, ಸಹ ನಿರ್ಮಾಪಕರಾಗಿ ಬಿ.ವೀರನಗೌಡ ಹಾಗೂ ಕೆ.ಎಸ್.ರಾವ್ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.


ಕರವೇ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಗಣಪತಿ ಭಟ್, ನಟ ಹಾಗೂ ನಿರ್ದೇಶಕ ರಾಜೇಶ್ ಧ್ರುವ ಮತ್ತಿತರರಿದ್ದರು. ಇದೇ ವೇಳೆ ವಿಜಯಪುರದ ಜ್ಞಾನ ಯೋಗಾಶ್ರಮದ ಅಧ್ಯಕ್ಷ ದಿ.ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net