ಶ್ರೀ ಬಲಭೀಮ ದೇವರ ಉತ್ಸವ ಅದ್ದೂರಿ

Vandali Balbheema
ವಂದಲಿ ಶ್ರೀ ಬಲಭೀಮ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ದೇವದುರ್ಗ: ತಾಲೂಕಿನ ವಂದಲಿ ಗ್ರಾಮದ ಆರಾಧ್ಯದೈವ ಶ್ರೀ ಬಲಭೀಮ ದೇವರ ಉತ್ಸವ ಭಾನುವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ಉತ್ಸವದ ಎರಡನೇ ದಿನ ಭಾನುವಾರ ರಾತ್ರಿ 10ಕ್ಕೆ ಶ್ರೀಆದಿಮನಿ ಸಿದ್ದಣ್ಣ ತಾತನವರು ದೈವದ ಹೇಳಿಕೆ ನೀಡಿದರು. ‘ಎರಡು ಕಾರ್ತಿಕ ಮಳೆ, ಬಿಳಿ ಪಕ್ಷಿ ತಿರುವಿ ಬಡದ್ದ, ಒಕ್ಕಲ ಮಗನ ಹಿಂದೆ ಇದ್ದೇನೆ ಪರಾಕ್’ ಎನ್ನುವ ಹೇಳಿಕೆ ಬಂದಿದೆ.

ಎರಡು ಕಾರ್ತಿಕ ಮಳೆ ಎಂದರೆ ಈ ವರ್ಷ ಮಳೆ-ಬೆಳೆ ಉತ್ತಮವಾಗಲಿದೆ ಎನ್ನಲಾಗಿದೆ. ಬಿಳಿ ಪಕ್ಷಿ ತಿರುವಿ ಬಡದ್ದ ಅಂದರೆ ಹತ್ತಿ ಬೆಳೆ ಅಷ್ಟಾಗಿ ಫಲ ನೀಡುವುದಿಲ್ಲ ಎಂದು ರೈತರು ಅರ್ಥೈಸುತ್ತಿದ್ದಾರೆ. ಒಕ್ಕಲ ಮಗನ ಹಿಂದೆ ಇದ್ದೀನಿ ಅಂದರೆ ಉತ್ತಮ ಮಳೆಯಾಗಿ ಅನ್ನದಾತರಿಗೆ ಯಾವುದೆ ಸಂಕಷ್ಟ ಬಂದರೂ ರಕ್ಷಣೆಗೆ ನಿಂತಿರುವುದಾಗಿ ಹೇಳಿಕೆಯನ್ನು ಭಕ್ತರು ವ್ಯಾಖ್ಯಾನಿಸುತ್ತಿದ್ದಾರೆ.

ತಾಲೂಕಿನ ವಂದಲಿ ಗ್ರಾಮದ ಬಲಭೀಮ ಹಾಗೂ ಮುಂಡರಗಿ ಶಿವರಾಯನ ಹೇಳಿಕೆಗಳ ಮೇಲೆ ರೈತರು ಅವಲಂಬಿತರಾಗಿದ್ದು, ಈ ಹೇಳಿಕೆಯಿಂದ ರೈತರು ಖುಷಿಯಿಂದ ಇದ್ದಾರೆ. ಇದಕ್ಕೂ ಮುನ್ನ ಭಾನುವಾರ ಬೆಳಗ್ಗೆ ಉತ್ಸವ ಮೂರ್ತಿಯ ಗಂಗಾಸ್ನಾನ, ತೀರ್ಥ-ಪ್ರಸಾದ, ಪಾದಗಟ್ಟೆಯಲ್ಲಿ ನೈವೇದ್ಯ, ಮಹಾಮಂಗಳಾರತಿ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net