ಶ್ರೀ ಅಂಬಾದೇವಿ ರಥೋತ್ಸವ ಅದ್ದೂರಿ

Snd Ambadevi Jatre
ಅಂಬಾಮಠದಲ್ಲಿ ಶ್ರೀ ಅಂಬಾದೇವಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.
Published on

ಸಿಂಧನೂರು: ತಾಲೂಕಿನ ಅಂಬಾಮಠದ ಸಿದ್ಧಪರ್ವತವಾಸಿ ಶ್ರೀ ಅಂಬಾದೇವಿ ರಥೋತ್ಸವ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಜೆ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ ಶ್ರೀ ಅಂಬಾದೇವಿ ಮೂರ್ತಿಗೆ ಕುಂಕುಮಾರ್ಚನೆ, ಅಭಿಷೇಕ, ಬಿಲ್ವಾರ್ಚನೆ ಸಹಸ್ರ ನಾಮಾವಳಿ ಜಪ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಪಲ್ಲಕ್ಕಿ ಉತ್ಸವ ನೆರವೇರಿತು. ಮಧ್ಯಾಹ್ನ ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ದರ್ಶನ ಪಡೆದುಕೊಂಡರು. ಸಂಜೆ ಶ್ರೀ ಅಂಬಾದೇವಿ ರಥೋತ್ಸವಕ್ಕೆ ತಹಸೀಲ್ದಾರ್ ಅರುಣ್ ದೇಸಾಯಿ ಚಾಲನೆ ನೀಡಿದರು. ರಥ ಮುಂದಕ್ಕೆ ಸಾಗಿದಂತೆ ಭಕ್ತರ ಉದ್ಘೋಷ ಮೊಳಗಿತು. ಉತ್ತತ್ತಿ, ಬಾಳೆ ಹಣ್ಣು ತೂರಿ ಭಕ್ತಿ ಸಮರ್ಪಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ರಂಗನಗೌಡ, ಸಮಿತಿ ಸದಸ್ಯರು ಇದ್ದರು.

ದರ್ಶನಕ್ಕೆ ವಿಶೇಷ ವ್ಯವಸ್ಥೆ: ಈ ಬಾರಿ ಅಂಬಾದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾರಣ ದೇವಸ್ಥಾನ ಮುಂಭಾಗದಲ್ಲಿ ಸಣ್ಣ ದೇಗುಲದಲ್ಲಿ ಅಂಬಾದೇವಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಇಕ್ಕಟ್ಟಾದ ಜಾಗವಿದ್ದರೂ, ತಾಲೂಕು ಆಡಳಿತ ಭಕ್ತರಿಗೆ ತೊಂದರೆ ಆಗದಂತೆ ಐದಾರು ಕಡೆ ದರ್ಶನ ಸಾಲು ಮಾಡಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ದರ್ಶನ ಪಡೆಯಲು ಹರಸಾಹಸ ಪಡಬೇಕಾಯಿತು. ಮತ್ತೊಂದು ವಿಶೇಷ ಎಂದರೆ 400 ಮೀಟರ್ ವಿಶಾಲ ಜಾಗದಲ್ಲಿ ರಥ ಬೀದಿ ನಿರ್ಮಿಸಿದ್ದರಿಂದ, ಅಲ್ಲಿಯೇ ರಥ ಎಳೆಯಲಾಯಿತು. ಭಕ್ತರಿಗೂ ರಥ ವೀಕ್ಷಿಸಲು ಅನುಕೂಲವಾಯಿತು.

ಬಿಗಿ ಪೊಲೀಸ್ ಭದ್ರತೆ: 15 ದಿನಗಳ ಕಾಲ ನಡೆಯುವ ಅಂಬಾದೇವಿ ಜಾತ್ರೆಗೆ ಸಹಸ್ರಾರು ಭಕ್ತರು ಆಗಮಿಸುವ ಕಾರಣ 300ಕ್ಕೂ ಹೆಚ್ಚು ಜನ ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿದೆ. ಸಿಂಧನೂರು, ಸಿರಗುಪ್ಪ ಹಾಗೂ ಗಂಗಾವತಿ ತಾಲೂಕುಗಳಿಂದ ಜಾತ್ರೆಗೆ ವಿಶೇಷ ಬಸ್ ಸೌಕರ್ಯ ಕೈಗೊಳ್ಳಲಾಗಿತ್ತು. ಸುತ್ತಲಿನ ಗ್ರಾಮಗಳ ಜನರು ಟ್ರ್ಯಾಕ್ಟರ್, ಖಾಸಗಿ ವಾಹನ, ಬಂಡಿಗಳಲ್ಲಿ ಆಗಮಿಸಿ, ದೇವಿ ದರ್ಶನ ಪಡೆಯುತ್ತಿರುವುದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net