ನಿರಂತರ ಪ್ರಯತ್ನದಿಂದ ದ್ವಿತೀಯ ಪಿಯುಸಿಯಲ್ಲಿ 98.17 ಪ್ರತಿಶತ ಅಂಕ ಪಡೆದ ಶ್ರೇಯಸ್

tejas
Published on

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಣಯಿಸುವಲ್ಲಿ ಮಹತ್ವದ ಪಾತ್ರ ವಹಿಸುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸರಿಯಾದ ಪೂರ್ವ ಸಿದ್ಧತೆ, ಬದ್ಧತೆ ಮತ್ತು ಪ್ರಯತ್ನ ಇದ್ದರೆ ಯಶಸ್ವಿಯಾಗಿ ಎದುರಿಸಬಹುದು ಎಂಬುದು ಶ್ರೇಯಸ್ ಎಂ ಚನ್ನಬಸಣ್ಣನವರ್ ಮಾತು.

ಮಂಗಳವಾರ ಪ್ರಕಟಗೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 98.17 ಪ್ರತಿಶತ ಫಲಿತಾಂಶ ಪಡೆದಿರುವ ಶ್ರೇಯಸ್ ವಿಜಯವಾಣಿಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸೌತ್‌ಎಂಡ್ ಸರ್ಕಲ್ ಸಮೀಪದಲ್ಲಿರುವ ಸುರಾನ ಸ್ವತಂತ್ರ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ಶ್ರೇಯಸ್ ಪ್ರವೇಶ ಪಡೆದ ದಿನದಿಂದಲೇ ರ‌್ಯಾಂಕ್ ಬಗ್ಗೆ ಸಂಕಲ್ಪ ಮಾಡಿಕೊಂಡು ಅದಕ್ಕೆ ಬೇಕಾದ ತಯಾರಿ ಮತ್ತು ಪರಿಶ್ರಮವನ್ನು ಹಾಕಿರುವುದಾಗಿ ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ವರ್ಷಪೂರ್ತಿ ಆರಾಮಾಗಿ ಕಳೆದು ಪರೀಕ್ಷೆ ಹತ್ತಿರ ಬಂದಾಗ ಓದಲು ಆರಂಭಿಸುತ್ತಾರೆ. ಹಾಗೆ ಮಾಡುವುದರಿಂದ ಗುರಿ ಮುಟ್ಟಲು ಸಾಧ್ಯವಿಲ್ಲ. ಪ್ರತಿದಿನ 4-6 ಗಂಟೆ ಕಡ್ಡಾಯವಾಗಿ ಓದಬೇಕು. ಎರಡು ವರ್ಷ ಪ್ರವಾಸ, ಇತರೆ ಕಾರ್ಯಕ್ರಮವನ್ನು ತ್ಯಜಿಸಬೇಕು. ಒಟ್ಟಾರೆ ಸರಿಯಾದ ಯೋಜನೆ ರೂಪಿಸಿಕೊಂಡು ಆ ಪ್ರಕಾರ ಓದುವುದನ್ನು ರೂಢಿಸಿಕೊಂಡರೆ ಉತ್ತಮ ಲಿತಾಂಶ ಪಡೆಯಬಹುದು ಎಂಬುದು ಶ್ರೇಯಸ್ ಮಾತು.

ಸ್ನೇಹಿತರೊಂದಿಗೆ ಅಭಿಪ್ರಾಯಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದೆ. ನನ್ನ ಪ್ರಯತ್ನಕ್ಕೆ ನಮ್ಮ ಕಾಲೇಜಿನ ಎಲ್ಲ ಶಿಕ್ಷಕರು ಹಾಗೂ ಪಾಲಕರು ಅಗತ್ಯಕ್ಕಿಂತ ಹೆಚ್ಚಿನ ಬೆಂಬಲ ನೀಡಿದ್ದು, ಎಲ್ಲರಿಗೂ ಶ್ರೇಯಸ್ ಕೃತಜ್ಞತೆ ಸಲ್ಲಿಸಿದ್ದಾರೆ. ಮಗನ ಸಾಧನೆಗೆ ತಂದೆ ಮಹಾಂತೇಶ್ ಎನ್. ಚನ್ನಬಸಣ್ಣನವರ್, ತಾಯಿ ಲಲಿತ ಎಂ.ಚನ್ನಬಸಣ್ಣನವರ್ ಸಂತಸ ವ್ಯಕ್ತಪಡಿಸಿದ್ದಾರೆ. ಮಹಾಂತೇಶ್‌ರವರು ವಿಆರ್‌ಎಲ್ ಸಂಸ್ಥೆಯ ಕೋರಿಯರ್ ವಿಭಾಗದ ಡಿಜಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net