

ವಿಜಯವಾಣಿ ಸುದ್ದಿಜಾಲ ಉಡುಪಿ
ಕ್ರೈಸ್ತ ಸಮುದಾಯದ ಮಕ್ಕಳು ಹೆಚ್ಚು ಸರ್ಕಾರಿ ಹುದ್ದೆ ಸೇರುವತ್ತ ಗಮನ ಹರಿಸಿದಾಗ ಸಮುದಾಯದೊಂದಿಗೆ ಜಿಲ್ಲೆಗೂ ಗೌರವ ತಂದು ಕೊಟ್ಟಂತಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಆಶಯ ವ್ಯಕ್ತಪಡಿಸಿದರು.
ಉಡುಪಿಯಲ್ಲಿರುವ ತಮ್ಮ ನಿವಾಸದ ಕಚೇರಿಯಲ್ಲಿ ಜೂ.27ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 372ನೇ ರ್ಯಾಂಕ್ ಗಳಿಸಿ ಸಾಧನೆ ಮಾಡಿರುವ ಶ್ರೇಯಾಂಶ್ ಗೋಮ್ಸ್ ಅವರನ್ನು ಧರ್ಮಪ್ರಾಂತ್ಯದ ಪರವಾಗಿ ಗೌರವಿಸಿ ಮಾತನಾಡಿದರು.
ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಮಾತನಾಡಿ, ಅನೇಕರಿಗೆ ಯುಪಿಎಸ್ಸಿಯಂತಹ ಉನ್ನತ ಪರೀಕ್ಷೆ ಬರೆದು ಸರ್ಕಾರಿ ಸೇವೆಯಲ್ಲಿ ತೊಡಗುವ ಕನಸು ಇರುತ್ತದೆ. ಅದರೆ, ಅದರಲ್ಲಿ ಉತ್ತೀರ್ಣರಾಗುವುದು ಸುಲಭವಲ್ಲ. ಕಠಿಣ ಮತ್ತು ನಿರಂತರ ಪರಿಶ್ರಮ ಅಗತ್ಯ. ಕಷ್ಟಗಳನ್ನೆಲ್ಲ ಎದುರಿಸಿ ಉಡುಪಿ ಚರ್ಚ್ನ ಶ್ರೇಯಾಂಶ್ ಸಾಧನೆ ಮಾಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಶ್ರೇಯಾಂಶ್ ತಂದೆ ಎಸ್.ಜೆ. ಗೋಮ್ಸ್, ತಾಯಿ ಮೇಬಲ್ ಶಾಂತಿ, ಧರ್ಮಪ್ರಾಂತ್ಯದ ಉಜ್ವಾಡ್ ಪತ್ರಿಕೆಯ ಸಂಪಾದಕ ವಂ.ಆಲ್ವಿನ್ ಸ್ವಿಕ್ವೇರಾ, ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್ ಇದ್ದರು.
ಶ್ರೇಯಾಂಶ್ ಗೋಮ್ಸ್ ಅವರ ತಂದೆ ಎಸ್.ಜೆ. ಗೋಮ್ಸ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆರ್ನಮಕ್ಕಿ ಗ್ರಾಮದವರು. ಪ್ರಸ್ತುತ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಸ್ಟೇಶನ್ ಮಾಸ್ಟರ್ ಆಗಿದ್ದು, ತಾಯಿ ಮೇಬಲ್ ಶಾಂತಿ ಗೃಹಿಣಿಯಾಗಿದ್ದಾರೆ. ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿರುವ ಶ್ರೇಯಾಂಶ್, ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಅವರ ಕಿರಿಯ ಸಹೋದರ ಶ್ರೇಯಾತಿ ಗೋಮ್ಸ್ ಮಣಿಪಾಲದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾನೆ.
ಧರ್ಮಪ್ರಾಂತ್ಯದಲ್ಲಿ ಕನಿಷ್ಠ 25 ಮಕ್ಕಳು ಸರ್ಕಾರದ ಅತ್ಯುನ್ನತ ಹುದ್ದೆ ಸೇರಬೇಕು ಎಂಬ ಗುರಿ ಹೊಂದಲಾಗಿತ್ತು. ಅದರಲ್ಲಿ ಪೂರ್ಣ ಯಶಸ್ಸು ದೊರೆಯದಿದ್ದರೂ ಸಮುದಾಯದ ಮಕ್ಕಳು ಸ್ವಲ್ಪ ಪ್ರಮಾಣದಲ್ಲಿ ಸಾಧನೆ ಮಾಡಿರುವುದೂ ಸಮಾಧಾನದ ಸಂಗತಿ. ಯುಪಿಎಸ್ಸಿಯಲ್ಲಿ ಉತ್ತಮ ಸಾಧನೆ ತೋರಿರುವ ಶ್ರೇಯಾಂಶ್ ಮಾದರಿಯಾಗಿದ್ದಾರೆ. ಮುಂದೆ ಸರ್ಕಾರಿ ಅಧಿಕಾರಿಯಾಗಿ ಹುದ್ದೆ ಸ್ವೀಕರಿಸಿದಾಗ ಹೆತ್ತವರೊಂದಿಗೆ ಸಮುದಾಯವೂ ಹೆಮ್ಮೆ ಪಡುತ್ತದೆ. | ಡಾ. ಜೆರಾಲ್ಡ್ ಐಸಾಕ್ ಲೋಬೊ. ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ