

ಶ್ರೀಶೈಲಂ : ತಂದೆ-ತಾಯಂದಿರರು ಮತ್ತು ಬಂಧುಗಳ ಬಂಧನಕಾರಕವಾದ ಮಾತುಗಳನ್ನು ಕೇಳುವ ಮೂಲಕ ಮನುಷ್ಯನಿಗೆ ಪ್ರಾಪ್ತವಾದ ಮಮಕಾರದ ಬಂಧನವು ಗುರುವಿನಿಂದ ಶಾಸ್ತ್ರೊಕ್ತ ಮಾತುಗಳನ್ನು ಶ್ರವಣ ಮಾಡುವುದರಿಂದ ನಿವೃತ್ತಿಯಾಗುತ್ತದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀಶೈಲ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 14 ನೇ ವರ್ಷದ ಶ್ರಾವಣ ಮಾಸದ ತಪೋನುಷ್ಠಾನದ ಮತ್ತು ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಪುರಾಣ ಪ್ರವಚನದ ಉದ್ಘಾಟನ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು. ಏನೂ ಗೊತ್ತಿರದ ಮಗುವಿಗೆ ಚಿಕ್ಕವನಿದ್ದಾಗ ಇದು ನಿನ್ನದು, ಇವರು ನಿನ್ನವರು, ಇದು ನಿನ್ನ ಮನೆ, ಇದು ನಿನ್ನ ಅಂಗಡಿ, ಇದು ನಿನ್ನ ಹೊಲ ಎಂದು ಹೇಳುವುದರಿಂದ ಮನುಷ್ಯನಿಗೆ ಮಮಕಾರದ ಬಂಧನ ಪ್ರಾಪ್ತವಾಗಿರುತ್ತದೆ ಎಂದರು.
ಈ ಮಮಕಾರವೇ ಮನುಷ್ಯನ ಎಲ್ಲ ದುಃಖಗಳಿಗೆ ಕಾರಣವಾಗಿರುವುದರಿಂದ ಜೀವಾತ್ಮನ ದುಃಖನಿವೃತ್ತಿಯಾಗಬೇಕಾದರೆ ಮೊದಲು ಮಮಕಾರವನ್ನು ಕಳೆದುಕೊಳ್ಳುವುದು ಅತಿ ಆವಶಕ್ಯಕ. ಅಂತೆಯೆ ಗುರುಗಳು ತಮ್ಮ ಬಳಿಗೆ ಬಂದ ಶಿಷ್ಯನಿಗೆ ಇದಾವುದೂ ನಿನ್ನದಲ್ಲ, ಇವರಾರೂ ನಿನ್ನವರಲ್ಲ, ಎಂದು ವಿರತಿಯ ಉಪದೇಶ ಮಾಡುತ್ತಾನೆ. ಹೀಗೆ ಬಂಧುಗಳ ಮಾತು ಕೇಳುವುದರಿಂದ ಬಂದ ಬಂಧನ ಗುರೂಪದೇಶದ ಶ್ರವಣದಿಂದ ನಿವೃತ್ತಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಶೈಲ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್.ಲವಣ್ ಅವರು, ದೇವಸ್ಥಾನದ ಅಭಿವೃದ್ಧಿಯಲ್ಲಿ ಪೀಠದ ಮಾರ್ಗದರ್ಶನ ಅತ್ಯಂತ ಅವಶ್ಯಕ. ತಿರುಪತಿ ಮಾದರಿಯಲ್ಲಿ ಶ್ರೀಶೈಲದಲ್ಲಿ ಅಭಿವೃದ್ಧಿಯಾಗಬೇಕು. ರಾಜ್ಯದ ತುಂಬೆಲ್ಲ ಅಲ್ಲಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ನಿರ್ಮಾಣವಾಗಬೇಕು ಇದರ ಜವಾಬ್ದಾರಿಯನ್ನು ಶ್ರೀಶೈಲ ಪೀಠದ ಜಗದ್ಗುರುಗಳು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರಲ್ಲದೇ, ‘ಸರ್ಕಾರವು ಪೀಠಕ್ಕೆ ಕೊಡುತ್ತಿರುವ 10 ಎಕರೆ ಸ್ಥಳದ ಪೈಕಿ ಐದು ಎಕರೆ ಸ್ಥಳವನ್ನು ನನ್ನ ಅವಧಿಯಲ್ಲೇ ಪೀಠಕ್ಕೆ ಕೊಡುತ್ತಿರುವುದು ಸಂತಸ ತಂದಿದೆ’ ಎಂದರು.
ಜೈನಾಪುರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ನವಲಗುಂದದ ಬಾಲ ಲೀಲಾ ಮಹಾಂತ ಶಿವಯೋಗಿಗಳ ಪುರಾಣ ಪ್ರಾರಂಭಿಸಿದರು. ಶ್ರೀಶೈಲ ದೇವಸ್ಥಾನದ ಪ್ರಧಾನ ಅರ್ಚಕ ವೀರಯ್ಯಸ್ವಾಮಿಜಿ, ಮೋಹನ್ ಹಾಗೂ ಜಗದೀಶ ಇದ್ದರು. ಜಂಗಮ ಸಮಾಜದ ಕಾರ್ಯದರ್ಶಿ ನಟರಾಜ ನಿರೂಪಿಸಿದರು. ಶರಣೆ ನೀಲಮ್ಮ ಸಂಗೀತ ಸೇವೆ ನೀಡಿದರು.