

ಬೆಳಗಾವಿ : ಪ್ರಾಚೀನ ಕಾಲದಿಂದಲೂ ವೇದ, ಆಗಮಗಳ ಅಧ್ಯಯನದಲ್ಲಿ ಮಹಿಳೆಯರಿಗೆ ಅವಕಾಶ, ಪ್ರಾಮುಖ್ಯತೆ ಇದೆ. ವೀರಶೈವ ಧರ್ಮದಲ್ಲಿ ಮಹಿಳೆಯರಿಗೂ ಪುರುಷರಷ್ಟೆ ಸಮಾನ ಸ್ಥಾನವಿದೆ. ಶ್ರೀಶೈಲ ಪೀಠದಿಂದ ಶೀಘ್ರದಲ್ಲೇ ಮಹಿಳೆಯರಿಗಾಗಿಯೇ ಮಹಿಳಾ ವೇದ ಗುರುಕುಲವನ್ನು ಆರಂಭಿಸಲಾಗುವುದು ಎಂದು ಶ್ರೀಶೈಲ ಪೀಠದ ಗಿರಿರಾಜ ಸೂರ್ಯಸಿಂಹಾನಾಧೀಶ್ವರ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಷಟಷ್ಥಲ ಬ್ರಹ್ಮ ಸಿದ್ದಲಿಂಗ ಶಿವಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ಗುರುಕುಲದಲ್ಲಿ ಮಂಗಳವಾರ ಮೇ 1 ರಿಂದ 30 ರವರೆಗೆ ಆಯೋಜಿಸಿದ್ದ ವೈದಿಕ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಆಶಿರ್ವಚನ ನೀಡಿದರು.
ಭಾರತೀಯ ಸಂಸ್ಕೃತಿ, ಧರ್ಮದ ಪ್ರತೀಕವಾಗಿರುವ ವೇದಗಳು ಆರಂಭದಿಂದಲೂ ಮಹಿಳೆಯರಿಗೆ ಮುಖ್ಯ ಸ್ಥಾನವನ್ನು ನೀಡಿವೆ. ವೇದಗಳ ರಚನೆ, ವಿಸ್ತರಣೆಯಲ್ಲಿ ಮಹಿಳೆಯರ ಪಾಲು ಇದೆ ಎಂದು ಜಗದ್ಗುರುಗಳು ತಿಳಿಸಿದರು.
ಮಕ್ಕಳಿಗೆ ಆರಂಭಿಕ ಹಂತದಿಂದಲೆ ಸಂಸ್ಕಾರ ಕಲಿಸುವುದು ಮುಖ್ಯವಾಗಿದೆ. ಆಸಕ್ತ ಎಲ್ಲರಿಗೂ ವೇದ ಕಲಿಸುವ ಇಚ್ಚೆ ಶ್ರೀ ಪೀಠಕ್ಕಿದ್ದು, ಶೀಘ್ರದಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಮಹಿಳಾ ಗುರುಕುಲವನ್ನು ಕೂಡಲಸಂಗಮ ಅಥವಾ ರಾಜ್ಯದ ಒಂದು ಸ್ಥಳದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಎಲ್ಲ ವಿದ್ಯೆಗಳಲ್ಲಿ ವೇದ ವಿದ್ಯೆ ಪರಮ ಶ್ರೇಷ್ಠವಾಗಿದೆ. ವೇದಗಳು ಅಪೌರುಷವಾದವು. ಅವು ಪರಮಾತ್ಮನ ಸೃಷ್ಟಿ. ಶಿವನ ಶ್ವಾಸದಿಂದ ವೇದಗಳು ರೂಪಗೊಂಡಿವೆ. ಅನುಭಾವದಿಂದ ಅನುಭವಕ್ಕೆ ಬಂದ ವೇದಗಳನ್ನು ಋಷಿಮುನಿಗಳು ರಚಿಸಿ, ಸಮಾಜಕ್ಕೆ ನೀಡಿದ್ದಾರೆ. ಋಷಿಗಳು ವ್ಯಷ್ಟಿ ಪ್ರಜ್ಞೆ ಕಳೆದು, ಸಮಷ್ಟಿ ಪ್ರಜ್ಞೆ ಮೂಡಿಸಿಕೊಂಡಾಗ ವೇದಗಳು ಬರವಣಿಗೆ ಸ್ವರೂಪ ಪಡೆದಿವೆ.ಪ್ರಪಂಚದ ಎಲ್ಲ ಜ್ಞಾನವು ಪರಮಾತ್ಮನಿಂದ ಸೃಷ್ಟಿ ಆಗಿದೆ ಎಂದು ಎಂದು ಶ್ರೀಶೈಲ ಶ್ರೀ ತಿಳಿಸಿದರು.
ಭಾರತವು ವೇದಶಾಸ್ತ್ರದಿಂದ ಜಗತ್ತಿನಲ್ಲಿ ವಿಶಿಷ್ಠವಾಗಿ ಗುರುತಿಸಿ, ಗೌರವಿಸಲ್ಪಡುತ್ತಿದೆ. ಅನೇಕ ಪಾಶ್ಚಿಮಾತ್ಯ ವಿದ್ವಾಂಸರು, ಸಂಶೋಧಕರು ಮತ್ತು ಆಧ್ಯಾತ್ಮಿಕ ಚಿಂತಕರು ವೇದಗಳ ಅಧ್ಯಯನಕ್ಕೆ ಆಸಕ್ತಿ ತೋರಿ, ಭಾರತಕ್ಕೆ ಬಂದಿದ್ದಾರೆ. ವೇದಗಳ ಶ್ರೇಷ್ಠತೆ ಅವರ ಅನುಭವಕ್ಕೂ ಬಂದಿದೆ ಎಂದು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯರು ಹೇಳಿದರು.
ಮಹಾರಾಷ್ಟ್ರದ ನೂಲ ಗ್ರಾಮದ ಗುರುಸಿದ್ದೇಶ್ವರ ಶಿವಾಚಾರ್ಯರು, ಭಾಗಲಕೋಟ ಜಿಲ್ಲೆಯ ಕೊಣ್ಣೂರ ಗ್ರಾಮದ ವಿಶ್ವಪ್ರಭುದೇವ ಶಿವಾಚಾರ್ಯರು ಮತ್ತು ಚಿಟಗುಪ್ಪಾದ ಮರುಳಾರಾದ್ಯ ಶಿವಾಚಾರ್ಯರು ಕಾರ್ಯಕ್ರಮದಲ್ಲಿ ಮಾತನಾಡಿದರು.
ವೇದಪಾಠ ಶಾಲೆ, ಗುರುಕುಲದ ಪ್ರಾಚಾರ್ಯರಾದ ಶ್ರೀಶೈಲ ಹಿರೇಮಠ ಗುರೂಜಿ ಅವರು ಪ್ರಾಸ್ತಾವಿಕ ಮಾತನಾಡಿದರು. ಯಡೂರ ವೀರಭದ್ರೇಶ್ವರ ದೇವಸ್ಥಾನದ ವ್ಯವಸ್ಥಾಪಕ ಅಡವಯ್ಯ ಅರಳಿಕಟ್ಟಿಮಠ ಸೇರಿದಂತೆ ಇತರರಿದ್ದರು. ಶಿಬಿರಾರ್ಥಿ ಬಾಲಕಿ ಸಮೃದ್ದಿ ಶಾಂತಾಪುರಮಠ ಪ್ರಾರ್ಥಿಸಿದಳು. ನಿಪ್ಪಾಣಿಯ ಯಶಸ್ವಿನಿ ಹಿರೇಮಠ ಸ್ವಾಗತಿಸಿದಳು. ಶಿಬರದ ಮಹಿಳಾ ನಿರ್ದೇಶಕಿ ಪ್ರೊ.ಶೀಲಾ ಚರಂತಿಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.