ಜಗತ್ತಿಗೆ ಪಾಠ ಕಲಿಸುತ್ತಿದೆ ಕರೊನಾ, ಆರೋಗ್ಯ ಸಚಿವ ಶ್ರೀರಾಮುಲು ಅಭಿಪ್ರಾಯ

KNC_0347
Published on

ಕೋಲಾರ: ಕರೊನಾದಿಂದ ಇಡೀ ಜಗತ್ತು ಪಾಠ ಕಲಿಯುವಂತಾಗಿದ್ದು, ಈ ಮೂಲಕ ಆರೋಗ್ಯ ಶಿಸ್ತನ್ನು ಕಾಪಾಡಿಕೊಳ್ಳಲು ಉತ್ತಮ ಅವಕಾಶ ಸಿಕ್ಕಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಭಿಪ್ರಾಯಿಸಿದರು.

ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಕರೊನಾ ನಿಯಂತ್ರಣ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಮಾತನಾಡಿ, ಪ್ರಕೃತಿ ಮೇಲಿನ ಅಸಡ್ಡೆ ಮತ್ತು ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳಿಂದ ನಾವು ಸಾಕಷ್ಟು ಪಾಠ ಕಲಿಯುವಂತಾಗಿದೆ. ಕರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿರುವ ಆರೋಗ್ಯ ಶಿಸ್ತನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದರು.

ಕರೊನಾ ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ ದೇಶದಲ್ಲಿ 3ನೇ ಸ್ಥಾನದಲ್ಲಿರುವುದು ಅಘಾತಕಾರಿ ಅಂಶ. ಇದನ್ನು ಎದುರಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ರಾಜ್ಯದಲ್ಲಿ ವೈದ್ಯರು ಅತ್ಯಂತ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಶಿಸಿದರು.

ಕಲಬುರಗಿಯಲ್ಲಿ ಸಾಕಷ್ಟು ಪ್ರಕರಣ ಬೆಳಕಿಗೆ ಬಂದ ಕೂಡಲೇ ಅಲ್ಲಿನ ಜಿಲ್ಲಾಧಿಕಾರಿ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳು ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ. ಕೋಲಾರ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಆದರೂ ಕ್ವಾರಂಟೈನ್‌ನಲ್ಲಿ ಇರುವ ವ್ಯಕ್ತಿಗಳನ್ನು ಸರಿಯಾಗಿ ಶುಶ್ರೂಷೆ ಮಾಡುವ ಮೂಲಕ ಗುಣಪಡಿಸಲು ಎಲ್ಲ ಪ್ರಯತ್ನ ನಡೆಯುತ್ತಿದೆ. ಸರ್ಕಾರ ಕರೊನಾ ತಡೆಗಟ್ಟಲು ಕೈಗೊಂಡಿರುವ ಕ್ರಮಗಳಿಗೆ ಜನ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರಿದರು.

ಕರೊನಾ ತಡೆಗಟ್ಟಲು ಸಿಎಂ ಸರ್ವ ಪಕ್ಷಗಳ ಸಭೆ ನಡೆಸಿದ್ದು ಸಕಾರಾತ್ಮಕ ಸಲಹೆ ವ್ಯಕ್ತವಾಗಿದೆ. ಇದನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತರುವ ಮೂಲಕ ರಾಜ್ಯವನ್ನು ಕರೊನಾ ಮುಕ್ತಗೊಳಿಸಲಾಗುವುದು ಎಂದರು.

ಕೋಲಾರದಲ್ಲಿ 3 ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲಾಗಿದೆ. ಇದಕ್ಕೆ ಬೇಕಾದ ಸಲಕರಣೆ ಒದಗಿಸಲು ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆಯಿದೆ, ಸಂಸದ ಎಸ್. ಮುನಿಸ್ವಾಮಿ ಸಂಸದರ ನಿಧಿಯಲ್ಲಿ 1 ಕೋಟಿ ರೂ. ನೀಡಲು ಸಮ್ಮತಿಸಿದ್ದು, ಇದೇ ರೀತಿ ರಾಜ್ಯದ ಎಲ್ಲ ಸಂಸದರು ತಮ್ಮ ವ್ಯಾಪ್ತಿಯ ಜಿಲ್ಲಾಸ್ಪತ್ರೆಗಳಿಗೆ ಅಗತ್ಯವಿರುವ ಸಲಕರಣೆ ಖರೀದಿಸಲು ಹಾಗೂ ಶಾಸಕರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಅನುದಾನ ಮಂಜೂರು ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು. ಶಾಸಕ ಕೆ. ಶ್ರೀನಿವಾಸಗೌಡ ಜಿಲ್ಲಾಸ್ಪತ್ರೆಗೆ ಬೇಕಾದ ಮೂಲ ಸೌಕರ್ಯಗಳಿಗೆ ತಮ್ಮ ಕ್ಷೇತ್ರದ ಅನುದಾನದಲ್ಲಿ ಹಣ ನೀಡುವುದಾಗಿ ಹೇಳಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆಯಾ ರಾಜ್ಯಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಗಡಿಭಾಗದಲ್ಲಿ ಸಿಲುಕಿದ ಜನರನ್ನು ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆದಿದೆ. ಮುಳಬಾಗಿಲಿಗೆ ಮಂಗಳೂರಿನಿಂದ ಬಂದಿದ್ದ ಬಂದರು ಕಾರ್ಮಿಕರನ್ನು ಆಂಧ್ರದ ನೆಲ್ಲೂರಿಗೆ ಕಳುಹಿಸಿಕೊಡಲಾಗುತ್ತಿದೆ. ಕೋಲಾರದ ವಕ್ಕಲೇರಿ ಹೋಬಳಿಯ ವಡಗೇರಿ ಗ್ರಾಮದಲ್ಲಿ ಕ್ಯಾಬ್ ಚಾಲಕರೊಬ್ಬರು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಕೋಲಾರಕ್ಕೆ ಬಂದಿದ್ದು, ಅವರನ್ನು ಕ್ವಾರಂಟೈನ್‌ನಲ್ಲಿಟ್ಟು ರಕ್ತ ಪರೀಕ್ಷೆ ವರದಿ ಬಂದ ನಂತರ ಮುಂದಿನ ಕ್ರಮ ವಹಿಸಲಾಗುವುದು ಎಂದರು.

ಸಿಆರ್‌ಫ್ ನಿಧಿಯಲ್ಲಿ ಸರ್ಕಾರಿ ಮೂಲಸೌಲಭ್ಯಕ್ಕೆ ಅನುದಾನ ಬಳಸಲು ಸಮ್ಮತಿಸಿದ ಕಂಪನಿಗಳ ಸಿಇಒ ಜತೆ ಸಭೆ ನಡೆಸಬೇಕೆಂದು ಶಾಸಕ ಕೆ. ಶ್ರೀನಿವಾಸಗೌಡ ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿ ಅಗತ್ಯವಿರುವ ಸಲಕರಣೆ ಖರೀದಿಸಲು ನೀಡಿರುವ ಪ್ರಸ್ತಾವನೆಗೆ ಅನುಮೋದನೆ ನೀಡಿ ಹಣ ಕಾಸು ಬಿಡುಗಡೆ ಮಾಡುವಂತೆ ಕೋರಿದರು.

ಸಂಸದ ಎಸ್. ಮುನಿಸ್ವಾಮಿ, ಡಿಸಿ ಸತ್ಯಭಾಮ, ಜಿಪಂ ಸಿಇಒ ಎಚ್.ವಿ. ದರ್ಶನ್, ಕೋಲಾರ ಎಸ್ಪಿ ಕಾರ್ತಿಕ್, ಕೆಜಿಎಫ್ ಎಸ್ಪಿ ಮಹಮದ್ ಸುಜೀತ, ಡಿಎಚ್‌ಒ ಡಾ.ಎಸ್.ಎನ್. ವಿಜಯಕುಮಾರ್, ಜಿಲ್ಲಾ ಸರ್ಜನ್ ಡಾ. ಎಸ್.ಜಿ. ನಾರಾಯಣಸ್ವಾಮಿ, ಐಎಂಎ ಜಿಲ್ಲಾಧ್ಯಕ್ಷ ಡಾ.ನಾರಾಯಣಸ್ವಾಮಿ, ಆರ್.ಎಲ್. ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಅಜೀಂ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಾರಿಣಿ ಹಾಜರಿದ್ದರು.

ಸಭೆ ನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಶ್ರೀರಾಮುಲು ಐಸೋಲೇಷನ್ ವಾರ್ಡ್ ಪರಿಶೀಲಿಸಿ ಶುಚಿತ್ವ ಮತ್ತು ರೋಗಿಗೆ ಬೇಕಾದ ಔಷಧ ಕೊರತೆ ಇಲ್ಲದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಶೀಘ್ರ ಮಾಸ್ಕ್ ಪೂರೈಕೆ: ರಾಜ್ಯದಲ್ಲಿ ಈವರೆಗೆ ಕರೊನಾ 73 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 3 ಮಂದಿ ಅಸುನೀಗಿದ್ದಾರೆ. 5 ಜನ ಗುಣಮುಖರಾಗಿದ್ದಾರೆ. 3170 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. 2874 ನೆಗೆಟಿವ್ ಫಲಿತಾಂಶ ಬಂದಿದೆ. 213 ಜನರ ರಕ್ತ, ಗಂಟಲ ದ್ರವ ಮಾದರಿ ಪರೀಕ್ಷೆ ವರದಿ ಬರಬೇಕಿದೆ. 278 ಜನರನ್ನು ಐಸೋಲೇಷನ್‌ನಲ್ಲಿಡಲಾಗಿದೆ. ಜಿಲ್ಲೆಗಳಿಗೆ ಬೇಕಾದ ಎನ್-95 ಹಾಗೂ ಮೂರು ಪದರದ ಮಾಸ್ಕ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಶೀಘ್ರದಲ್ಲಿ ಪೂರೈಸಲಾಗುವುದು ಎಂದು ಶ್ರೀರಾಮುಲು ತಿಳಿಸಿದರು.

ನಾನು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅಣ್ಣ ತಮ್ಮಂದಿರಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ. ಕೆಲವರು ಬೇಕಾದ್ದನ್ನು ಮಾತನಾಡುತ್ತಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಯಾರು ತಪ್ಪಾಗಿ ತಿಳಿದುಕೊಳ್ಳಬಾರದು. ಶ್ರೀರಾಮುಲು, ಆರೋಗ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net