ಎಪ್ರೀಲ್ 2ನೇ ವಾರದಲ್ಲಿ‌13 ಹಾಡುಗಳ 'ಶ್ರೀಮಂತ' ಬಿಡುಗಡೆ ! ಚಲನಚಿತ್ರದಲ್ಲಿ ರೈತರ ಬದುಕಿನ ಅನಾವರಣ

IMG-20230328-WA0002.jpg
Published on

ಬೆಳಗಾವಿ : ಮರೆಯಾಗುತ್ತಿರುವ ಹಳ್ಳಿಯ ಸುಗ್ಗಿ, ಜಾತ್ರೆ, ಹಬ್ಬ, ಹಾಡು, ಹಳ್ಳಿ ಆಟಗಳು, ಗ್ರಾಮೀಣ ಕಲೆಗಳ ಸಂಭ್ರಮಗಳನ್ನು ನೆನಪಿಸುವುದರೊಂದಿಗೆ ಅನ್ನದಾತ ರೈತನೇ ಜಗತ್ತಿನ ಅತೀ ದೊಡ್ಡ ಶ್ರೀಮಂತ ಎಂದು ಸಾಕ್ಷೀಕರಿಸುವ ಚಲನಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಇದರಲ್ಲಿ 8 ಹಾಡು, ಸಂದರ್ಭಕ್ಕೆ ತಕ್ಕ 5 ಬೀಟ್ಸ್ ಸೇರಿದಂತೆ ಒಟ್ಟು 13 ಹಾಡುಗಳು ಚಿತ್ರದಲ್ಲಿದ್ದು ಎಪ್ರಿಲ್ ಎರಡನೇ ವಾರದಲ್ಲಿ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಶ್ರೀಮಂತ ಚಲನಚಿತ್ರದ ನಿರ್ದೇಶಕ, ನಿರ್ಮಾಪಕ ಪಾಸನ್ ರಮೇಶ್ ಹೇಳಿದರು.‌

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಭ್ರಮಗಳನ್ನು ತಿಳಿಹಾಸ್ಯದ ಮೂಲಕ ಪ್ರೇಕ್ಷಕರಿಗೆ ಮನರಂಜಿಸುವುದು ಚಿತ್ರದ ಆಶಯವಾಗಿದ್ದು,  ಈಗಾಗಲೇ ಬಿಡುಗಡೆಗೊಂಡಿರುವ ಹಾಡುಗಳಿಗೆ ಪ್ರೇಕ್ಷಕರಿಂದ ಉತ್ತಮ‌ಪ್ರತಿಕ್ರಿಯೆ ಸಿಕ್ಕಿದೆ ಎಂದರು.

ಟಿ.ಕೆ.ರಮೇಶ ಹೆಸರಿನ ಅವರು ಪಾಸನ್ ರಮೇಶ್‌ ಎಂಬ ಕಾವ್ಯನಾಮದಿಂದ ಕಳೆದ ಹತ್ತು ವರ್ಷಗಳಿಂದ ಕನ್ನಡ ಚಲನಚಿತ್ರರಂಗದಲ್ಲಿ ಕಥೆ, ನಿರ್ದೇಶನ, ನಿರ್ಮಾಣ ವಿಭಾಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಈಗ ತಮ್ಮದೇ ಗೋಲ್ಡನ್ ರೈನ್ ಮೂವೀಸ್ ಸಂಸ್ಥೆಯಡಿಯಲ್ಲಿ ಪ್ರಥಮಬಾರಿಗೆ ಸ್ವತಂತ್ರವಾಗಿ "ಶ್ರೀಮಂತ" ಎಂಬ ಚಲನಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿತ್ತಿರುವುದಾಗಿ ಹೇಳಿದರು. ಅಲ್ಲದೇ ಚಿತ್ರ ನಿರ್ಮಾಣದಲ್ಲಿ ಜಿ.ನಾರಾಯಣಪ್ಪ ಹಾಗು ವಿ.ಸಂಜಯ್‌ ಬಾಬು ರವರು ತಮ್ಮೊಂದಿಗೆ ಕೈಜೋಡಿಸಿದ್ದಾರೆ ಎಂದು ತಿಳಿಸಿದರು.

ಮುಖ್ಯ ಭೂಮಿಕೆಯಲ್ಲಿ ಭಾರತದ ರಿಯಲ್ ಹೀರೋ ಎನಿಸಿಕೊಂಡಿರುವ ಚಿತ್ರನಟ "ಸೋನೂ ಸೂದ್" ರವರು ಪ್ರಪ್ರಥಮವಾಗಿ ಕನ್ನಡ ಚಿತ್ರದಲ್ಲಿ ನಾಯಕನಟರಾಗಿ ಅಭಿನಯಿಸಿದ್ದು, ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್ ಮೆನನ್ ಜತೆಗೆ ಕಲ್ಯಾಣ ಕರ್ನಾಟಕದ ಕ್ರಾಂತಿ ಎಂಬ ಯುವಪ್ರತಿಭೆಯನ್ನು  ಪರಿಚಯಿಸುತ್ತಿದ್ದೇವೆ ಎಂದ ಅವರು,  ಹಿರಿಯ ಕಲಾವಿದರುಗಳಾದ ರಮೇಶ್‌ ಭಟ್, ರವಿಶಂಕರ್ ಗೌಡ, ಸಾದು ಕೋಕಿಲ, ಚರಣ್ ರಾಜ್, ಕಲ್ಯಾಣಿ, ಗಿರಿ, ರಾಜು ತಾಳಿಕೋಟೆ, ಕುರಿಬಾಂಡ್ ರಂಗ, ಬ್ಯಾಂಕ್‌ ಮಂಜಣ್ಣ, ಬಸವರಾಜ ಹಾಸನ್ ಮುಂತಾದವರೊಂದಿಗೆ ಹಲವಾರು ಗ್ರಾಮೀಣ ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ ಎಂದು ಹೇಳಿದರು.

ಇದೊಂದು ಸಾಮುದಾಯಿಕ ಚಿತ್ರವಾಗಿದ್ದು ಬಹುಪಾಲು ಸೃಜ ಲೊಕೇಷನ್‌ಗಳಲ್ಲೇ ಚಿತ್ರೀಕರಿಸಲಾಗಿದೆ.  ನಾದಬ್ರಹ್ಮ ಡಾ. ಹಂಸಲೇಖ ಸಂಗೀತ ಸಾಹಿತ್ಯವಿದ್ದು, ರವಿಕುಮಾರ್ ಸನ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ, ಮಾಸ್ ಮಾದ ಸಾಹಸ, ಮಧನ್-ಹರಿಣಿ ಹಾಗೂ ಮೋಹನ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಚಿತ್ರ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ, ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಹಾಯಕ ನಿರ್ದೇಶಕ ಶಿವರಾಜ ದಳವಾಯಿ, ಕಲಾವಿದರಾದ ವಾಲ್ನಟ್ ಮಹೇಶ, ಸತೀಶ ಪಟೇಲ, ಗುರು ಸಿದ್ದೇಗೌಡ ಸೇರಿದಂತೆ ಇತರರಿದ್ದರು.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net