ಮಯೂರ ವಾಹನಾಲಂಕಾರದಲ್ಲಿ ಕಂಗೊಳಿಸಿದ ಶ್ರೀ ಶೃಂಗೇರಿ ಶಾರದೆ

18sri-2
ಶೃಂಗೇರಿ ಶ್ರೀ ಶಾರದೆ ಮಯೂರ ವಾಹನಾಲಂಕಾರದಲ್ಲಿ ಕಂಗೊಳಿಸಿ ಭಕ್ತರನ್ನು ಅನುಗ್ರಹಿಸಿದಳು.
Published on

ಶೃಂಗೇರಿ: ನವರಾತ್ರಿ ಉತ್ಸವದ ಪ್ರಯುಕ್ತ ಬುಧವಾರ ಮಯೂರ ವಾಹನಾಲಂಕಾರದಲ್ಲಿ ಶ್ರೀ ಶಾರದೆ ಕಂಗೊಳಿಸಿದಳು. ಕೌಮಾರಿಯಾಗಿ ಮಾತೆ ಶಾರದೆ ಕೈಯಲ್ಲಿ ಶಸ್ತ್ರ, ಆಯುಧಗಳನ್ನು ಧರಿಸಿ ನವಿಲನ್ನೇರಿ ಕುಮಾರಸ್ವಾಮಿಯ ಶಕ್ತಿಯಾಗಿ ಭಕ್ತರನ್ನು ಅನುಗ್ರಹಿಸಿದಳು.
ನವರಾತ್ರಿ ಪ್ರಯುಕ್ತ ಬುಧವಾರ ಶ್ರೀಮಠದಲ್ಲಿ ನಾಲ್ಕು ವೇದಗಳ ಪಾರಾಯಣಗಳು, ವಾಲ್ಮೀಕಿ ರಾಮಾಯಣ, ದೇವೀಭಾಗವತ, ಸೂತಸಂಹಿತೆ, ಲಕ್ಷ್ಮೀನಾರಾಯಣ ಹೃದಯ, ದುರ್ಗಾಸಪ್ತ ಶತಿ ಪಾರಾಯಣಗಳು ನೆರವೇರಿತು. ದುರ್ಗಾಜಪ, ಭುವನೇಶ್ವರಿ ಜಪ, ಶ್ರೀಸೂಕ್ತ ಜಪಗಳು, ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತರುದ್ರಾಭೀಷೇಕ, ಜಗನ್ಮಾತೆಯ ಅವಾಸಸ್ಥಾನವೆಂದು ಶಾಸದಲ್ಲಿ ತಿಳಿಸಿರುವ ಶ್ರೀ ಚಕ್ರಕ್ಕೆ ನವಾವರಣ ಪೂಜೆ, ಸುವಾಸಿನೀ ಹಾಗೂ ಕುಮಾರೀ ಪೂಜೆ ನೆರವೇರಿತು. ಜಗದ್ಗುರುಗಳು ಶ್ರೀಶಾರದೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬೀದಿ ಉತ್ಸವದಲ್ಲಿ ಮೆಣಸೆ ಗ್ರಾಪಂ ಭಕ್ತದಿಗಳು ಭಾಗಿಯಾದರು. ಶ್ರೀ ಶಾರದಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕ್ಷೇಮಾಭಿವೃದ್ಧಿ ಸಂಘ, ಶ್ರೀ ರಾಮ ಸೇವಾಸಮಿತಿ ಹುಲಗಾರು, ಪ್ರಜ್ಞಾ ಯುವಕ ಸಂಘ ಕುಂಚೇಬೈಲು, ಶ್ರೀ ಶಾರಾದಾಂಬಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ವಿವಿಧ ಶಾಲಾ ಕಾಲೇಜುಗಳು ಭಾಗವಹಿಸಿದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಸೂರಿನ ವಿದುಷಿ ಡಾ.ಶ್ರೀಮತಿ ವಿದ್ಯಾರಾಜ ಮತ್ತು ಸಂಗಡಿಗರಿಂದ ಹಾಡುಗಾರಿಕೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net