

ನಂಜನಗೂಡು: ತಾಲೂಕಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ಸುತ್ತೂರು ನಂಜುಂಡನಾಯಕ ಅವರಿಗೆ ಜೆಎಸ್‌ಎಸ್ ಸಂಸ್ಥೆಯಿಂದ ಕೊಡಮಾಡುವ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಲಭ್ಯವಾಗಿದ್ದು, ಜುಲೈ 6ರಂದು ನಂಜನಗೂಡಿನಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಬೆಳಗ್ಗೆ 11 ಗಂಟೆಗೆ ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಪತ್ರಿಕಾ ದಿನಾಚರಣೆ ಮತ್ತು ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೆರವೇರಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ ನೆರವೇರಿಸಲಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನೀಲ್ ಬೋಸ್ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಿದ್ದಾರೆ. ಜೆಎಸ್‌ಎಸ್ ಸಂಸ್ಥೆಯ ಗೌರವ ಸಹಾಯಕ ಆಡಳಿತಾಧಿಕಾರಿ ಎಸ್.ಪಿ.ಉದಯಶಂಕರ್ ಹಾಗೂ ಜೆಎಸ್‌ಎಸ್ ಸಂಸ್ಥೆಯ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಮಾರಂಭದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಸತ್ಯನಾರಾಯಣ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.