

ಶೃಂಗೇರಿ: ಶರನ್ನವರಾತ್ರಿ ಉತ್ಸವ ಪ್ರಯುಕ್ತ ಶ್ರೀ ಶಾರದಾಂಬಾ ಮಹಾರಥೋತ್ಸವ ಹಾಗೂ ಜಗದ್ಗುರು ಶ್ರೀ ವಿಧುಶೇಖರಭಾರತೀ ಅವರ ಅಡ್ಡಪಲ್ಲಕ್ಕಿ ಉತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಬೆಂಗಳೂರು, ಆಂಧ್ರಪ್ರದೇಶ, ತಮಿಳುನಾಡು, ಮುಂಬೈ, ಮಂಗಳೂರು, ಉಡುಪಿ, ಶಿವಮೊಗ್ಗ, ಹಾಸನ ಮುಂತಾದ ಕಡೆಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ರಥೋತ್ಸವ ಹಾಗೂ ಜಗದ್ಗುರುಗಳ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಮುಖ್ಯಬೀದಿಯ ಇಕ್ಕೆಲಗಳಲ್ಲಿ ಜಮಾಯಿಸಿದರು. ಮಠದಿಂದ ಆಗಮಿಸಿದ ಶ್ರೀ ಶಾರದೆಯ ಉತ್ಸವಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸಿದ ಬಳಿಕ ಮಹಾರಥೋತ್ಸವ ಪ್ರಾರಂಭಗೊಂಡಿತು.
ತಳಿರುತೋರಣ, ರಂಗವಲ್ಲಿ, ಸಾಲಂಕೃತಗೊಂಡ ಆನೆಗಳು, ಅಶ್ವಗಳು, ಮಠದ ಛತ್ರಿಚಾಮರಗಳು, ವೇದ-ವಾದ್ಯಘೋಷಗಳು, ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು ಅನಾವರಣಗೊಳಿಸಿದ ಸ್ತಬ್ಧ ಚಿತ್ರಗಳು ಉತ್ಸವದ ಮೆರುಗು ಹೆಚ್ಚಿಸಿದವು.
ಜೈ-ಜೈ ಮಾತಾ ಶಾರದಾಮಾತಾ, ಎಂಥ ಚೆಂದ ಎಂಥ ಅಂದ ಶಾರದಮ್ಮ ಎಂದು ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಭಜನಾಮಂಡಳಿಗಳು, ಅಡ್ಡಗದ್ದೆ ಗ್ರಾಪಂ ವ್ಯಾಪ್ತಿಯ ಮಕ್ಕಳ ದೇವಿಯ ವಿವಿಧ ರೂಪಗಳ ಸ್ತಬ್ಧ ಚಿತ್ರ, ಕೂತುಗೋಡು ಗ್ರಾಪಂ ಹಾಗೂ ಕರ್ನಾಟಕ ಜಾನಪದ ಪರಿಷತ್ ಅನಾವರಣಗೊಳಿಸಿದ ಜಾನಪದ ಕಲಾವೈಭವಗಳು, ಗೋಚವಳ್ಳಿ ಯುವಕ ಸಂಘದ ಮರಗಾಲು ಕುಣಿತ, ನಾಟ್ಯವೈಭವ ನೃತ್ಯ ಅಕಾಡೆಮಿ ಅವರ ನೃತ್ಯವೈಭವ, ಅಜ್ಜಂಪುರ ಕಲಾತಂಡದ ವೀರಗಾಸೆ, ವಿದ್ಯಾರಣ್ಯಪುರ ಗ್ರಾಪಂನ ಮರೆಯಾಗುತ್ತಿರುವ ಪೆಟ್ಲುಹಬ್ಬ ಹಾಗೂ ರಕ್ತೇಶ್ವರಿ ವರ್ಕ್ಸ್ ಅವರ ಉಗ್ರನರಸಿಂಹ ಸ್ತಬ್ಧ ಚಿತ್ರ, ರೇವಂತ್ ಶೃಂಗೇರಿ ಅವರ ಹನುಮಾನ್, ಗೀರ್ವಾಣಿ ಮಹಿಳಾ ಮಂಡಳಿ ಹಾಗೂ ಪಟ್ಟಣ ವ್ಯಾಪ್ತಿಯ ಭಜನಾ ಮಂಡಳಿಯ ಭಜನಾ ಕಾರ್ಯಕ್ರಮ, ಉಡುಪಿ ಶ್ರೀ ದುರ್ಗಾಪರಮೇಶ್ವರಿ ಚೆಂಡೆಬಳಗದ ಚೆಂಡೆ ವಾದನ, ವಿಶ್ವಕರ್ಮ ಗೆಳೆಯರ ಬಳಗದ ಶ್ರೀರಾಮ, ಕಲ್ಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಜಗನ್ಮಾತೆಯ ವಿವಿಧರೂಪಗಳ ಸ್ತಬ್ಧಚಿತ್ರ, ಜ್ಞಾನಭಾರತೀ ವಿದ್ಯಾಕೇಂದ್ರದ ಕಲಾತಂಡದಿಂದ ಚೆಂಡೆವಾದನ, ಶುಂಠಿಹಕ್ಲು, ಸಿಂದೋಡಿ ಗ್ರಾಮದ ಸ್ತಬ್ಧಚಿತ್ರಗಳು, ಬಿಜಿಎಸ್ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಸ್ತುತಿ ಆಚಾರ್ಯ ಪ್ರಚುರಪಡಿಸಿದ ಶ್ರೀಶಾರದೆ ಇತ್ಯಾದಿ ಮಹಾರಥೋತ್ಸವದ ಮೆರುಗು ಹೆಚ್ಚಿಸಿದವು. ಜನರು ಜಗದ್ಗುರುಗಳಿಗೆ ಫಲ ಸಮರ್ಪಿಸಿ, ಆರತಿ ಬೆಳಗಿ ಆಶೀರ್ವಾದ ಪಡೆದರು.
ಶ್ರೀ ಶಾರದೆ ಗಜಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದಳು. ಪದ್ಮದಲ್ಲಿ ಉಪವಿಷ್ಪಳಾಗಿ, ಪಾರ್ಶ್ವಭಾಗದಲ್ಲಿ ಸೊಂಡಿಲೆತ್ತಿರುವ ಆನೆಗಳಿಂದ ನಮಸ್ಕರಿಸಲ್ಪಡುತ್ತ್ತ ಮಂದಸ್ಮಿತ ವದನೆಯಾಗಿ ಪ್ರಸನ್ನರೂಪಳಾಗಿ ಭಕ್ತಾದಿಗಳಿಗೆ ಧನ-ಧಾನ್ಯಗಳನ್ನು, ಸುಖ-ಸಂಪತ್ತುಗಳನ್ನು ಕರುಣಿಸುವ ಮಾತೆಯಾದಳು. ನಾನಾ ಪ್ರಾಂತ್ಯಗಳಿಂದ ಆಗಮಿಸಿದ ಭಕ್ತರು ಶ್ರೀ ಶಾರದೆಯ ದರ್ಶನಪಡೆದರು. ಮಠದಲ್ಲಿ ಲಕ್ಷ್ಮೀನಾರಾಯಣ ಹೋಮ, ರಾಮ ಪಟ್ಟಾಭಿಷೇಕ ಪಾರಾಯಣ, ದುರ್ಗಾಜಪ, ಭುವನೇಶ್ವರಿ ಜಪ, ಶ್ರೀಸೂಕ್ತ ಜಪಗಳು, ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಜಗನ್ಮಾತೆಯ ಆವಾಸಸ್ಥಾನವೆಂದು ಶಾಸ್ತ್ರದಲ್ಲಿ ತಿಳಿಸಿರುವ ಶ್ರೀಚಕ್ರಕ್ಕೆ ನವಾವರಣಪೂಜೆ, ಸುವಾಸಿನೀ ಹಾಗೂ ಕುಮಾರೀಪೂಜೆ ನೆರವೇರಿತು. ಜಗದ್ಗುರುಗಳು ಶ್ರೀ ಶಾರದೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮಠದಲ್ಲಿ ಭಾನುವಾರ ನಡೆದ ಹಗಲು ದರ್ಬಾರಿನಲ್ಲಿ ಕಿರಿಯ ಶ್ರೀಗಳು ಸಂಪ್ರದಾಯಕ್ಕೆ ಅನುಗುಣವಾಗಿ ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರು ದೇವಾಲಯವನ್ನು ಪ್ರವೇಶಿಸಿದ ಬಳಿಕ ವ್ಯಾಖ್ಯಾನ ಸಿಂಹಾಸನದಲ್ಲಿ ಇರುವ ಶ್ರೀ ಶಾರದಾಮೂರ್ತಿಯನ್ನು ಬಂಗಾರದ ರಥದಲ್ಲಿ ಕುಳ್ಳಿರಿಸಿ ದೇವಾಲಯದ ಒಳಪ್ರಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ಘೊಷಗಳೊಂದಿಗೆ ರಥೋತ್ಸವ ನೆರವೇರಿಸಲಾಯಿತು. ಶ್ರೀ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಆಸೀನರಾದ ಬಳಿಕ ವೇದಗಳ ಪಾರಾಯಣ, ಸಪ್ತಶತಿ ಪಾರಾಯಣ, ಪಂಚಾಂಗಶ್ರವಣ, ಸಂಗೀತ, ಸರ್ವವಾದ್ಯಸೇವೆ ನಡೆಯಿತು. ದೇವಿಗೆ ಮಹಾಮಂಗಳಾರತಿ ನೆರವೇರಿತು. ಶ್ರೀಗಳು ಭಕ್ತರಿಗೆ ತೀರ್ಥ ನೀಡಿ ಅನುಗ್ರಹಿಸಿದರು.
ಜಗನ್ಮಾತೆಗೆ ಒಂಬತ್ತು ದಿನಗಳ ಕಾಲ ವಿವಿಧ ಅಲಂಕಾರಗಳು, ಮಠದಲ್ಲಿ ಪ್ರತಿ ದಿನ ನಡೆಯುವ ಹೋಮಗಳು, ಪಾರಾಯಣಗಳು, ಜಗದ್ಗುರುಗಳ ಕಾರ್ಯಕ್ರಮಗಳು. ಹೀಗೆ ವರ್ಷಕೊಮ್ಮೆ ನಾಡಿನ ಎಲ್ಲ ವರ್ಗದ ಜನರನ್ನು ಒಂದೆಡೆ ಸೇರಿಸುವ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ದಿಕ್ಕಿನಲ್ಲಿ ಶೃಂಗೇರಿಯಲ್ಲಿ ನಡೆಯುವ ನವರಾತ್ರಿ ಉತ್ಸವ ಮಹತ್ವಪೂರ್ಣವಾಗಿದೆ. ಅದರ ವೈಭವವನ್ನು ಪ್ರತ್ಯಕ್ಷವಾಗಿ ಕಂಡಾಗ ಆಗುವ ಆನಂದ ಚಿರಸ್ಥಾಯಿಯಾಗಿ ಉಳಿಯುವ ಆಧ್ಯಾತ್ಮಭಾವ. ಸಂಪ್ರದಾಯಗಳಿಗೆ ಚ್ಯುತಿಬಾರದಂತೆ ನಿರಂತರವಾಗಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬಂದಿರುವ ಇಲ್ಲಿನ ಅವಿಚ್ಛಿನ್ನ ಗುರುಪರಂಪರೆ. ಜೀವನದಲ್ಲಿ ಒಮ್ಮೆಯಾದರೂ ನವರಾತ್ರಿ ಹಬ್ಬವನ್ನು ನೋಡಲೇಬೇಕು ಎಂಬ ಭಕ್ತಾದಿಗಳ ಆಧ್ಯಾತ್ಮಿಕ ತುಡಿತಕ್ಕೆ ಮಹಾರಥೋತ್ಸವ ಸಾಕ್ಷಿಯಾಯಿತು. 15 ಸಾವಿರಕ್ಕೂ ಹೆಚ್ಚು ಮಂದಿ ಶ್ರೀ ಶಾರದಾಭೋಜನಪ್ರಸಾದ ಸ್ವೀಕರಿಸಿದರು. ಅ.14ರಂದು ಶ್ರೀ ಶಾರದಮ್ಮನವರಿಗೆ ಪುನಃ ಅಭಿಷೇಕ ನಡೆಯಲಿದೆ. ರಾತ್ರಿ ತೆಪ್ಪೋತ್ಸವದೊಂದಿಗೆ ನವರಾತ್ರಿಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.