ರಂಗಮಂದಿರಕ್ಕಾಗಿ ದಸರಾ ಕ್ರೀಡೋತ್ಸವ : ಡಾ.ರಾಮಕೃಷ್ಣ ಎಸ್. ಮಾಹಿತಿ

Published on

ಬಂಟ್ವಾಳ: ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ ವತಿಯಿಂದ 8ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಪ್ರಯುಕ್ತ ಮೂಡುಪಡುಕೋಡಿ ಸ.ಹಿ.ಪ್ರಾ.ಶಾಲಾ ಮೈದಾನದಲ್ಲಿ ಶಾಶ್ವತ ಬಯಲು ರಂಗಮಂದಿರ ನಿರ್ಮಾಣಕ್ಕಾಗಿ ದಸರಾ ಕ್ರೀಡೋತ್ಸವ ಅ.6ರಂದು ಮತ್ತು 9ರಂದು ಶ್ರೀ ಶಾರದಾ ಪೂಜಾ ಮಹೋತ್ಸವ ಶಾಲಾ ವಠಾರದಲ್ಲಿ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್. ತಿಳಿಸಿದರು.

ಗುರುವಾರ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಕ್ರೀಡಾಕೂಟ, ಕ್ಯಾನ್ಸರ್ ಜಾಗೃತಿ ಅಭಿಯಾನ, ಸಾಧಕರಿಗೆ ಸನ್ಮಾನ ಹಾಗೂ ಆಹಾರ ಮೇಳ ನಡೆಯಲಿದೆ. ಮಂಗಳೂರು ಎಂಐಒ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯಸ್ಥ ಡಾ.ಸುರೇಶ್ ರಾವ್ ಕ್ಯಾನ್ಸರ್ ಜಾಗೃತಿ ಜಾಥಾ ಉದ್ಘಾಟಿಸುವರು. ಹೊಕ್ಕಾಡಿಗೋಳಿ ಕಂಬಳ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು ಕ್ರೀಡಾಕೂಟ ಉದ್ಘಾಟಿಸುವರು.

ಸಮಾರೋಪದಲ್ಲಿ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸುವರು. ರಾತ್ರಿ ಹೊನಲು ಬೆಳಕಿನ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಟವನ್ನು ಉದ್ಯಮಿ ಭುವನೇಶ್ ಪಚ್ಚಿನಡ್ಕ ಉದ್ಘಾಟಿಸುವರು. ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿರುವರು ಎಂದರು.

ಶ್ರೀ ಶಾರದಾ ಪೂಜಾ ಮಹೋತ್ಸವವು 9ರಂದು ಗೋವಿಂದ ಭಟ್ ಕರಿಮಲೆ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಗ್ಗೆ ಪ್ರತಿಷ್ಠಾಪನೆ, ಭಜನೆ, ಬಳಿಕ ಧಾರ್ಮಿಕ ಸಭೆ ನಡೆಯಲಿದ್ದು, ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ಮೊದಲಾದ ಕಾರ್ಯಕ್ರಮ ನಡೆಯಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಶೇಖರ ಪೂಜಾರಿ ಅಗಲ್ದೋಡಿ, ಕಾರ್ಯದರ್ಶಿ ದಯಾನಂದ ಎಸ್.ಎರ್ಮೆನಾಡು, ಕೋಶಾಧಿಕಾರಿ ಸುಪ್ರೀತ್ ಜೈನ್ ಎಡ್ತೂರುಗುತ್ತು, ಉತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಎರ್ಮೆನಾಡು, ಗ್ರಾ.ಪಂ. ಸದಸ್ಯ ಸುಧೀಂದ್ರ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net