

ವಿಜಯವಾಣಿ ಸುದ್ದಿಜಾಲ ಕೋಟ
ಸನಾತನ ಧರ್ಮ ಸಂಕಷ್ಟದಲ್ಲಿದ್ದಾಗ ಅವತರಿಸಿ ಧರ್ಮ ಸಂಸ್ಥಾಪನೆ ಮಾಡಿದವರು ಶ್ರೀ ಶಂಕರ ಭಗವತ್ಪಾದರು. ಆದ್ದರಿಂದಲೇ ಅವರಿಗೆ ಧರ್ಮ ಸಂಸ್ಥಾಪನಾಚಾರ್ಯ ಎಂಬ ಹೆಸರು. ವೇದ, ವೇದಾಂತ ಅರಿತವರು ಅವರು. ವೇದಗಳ ಅಂತ್ಯದವರೆಗೂ ಅರಿತು ಭಾಷ್ಯ ಬರೆದು ಸರಳಗೊಳಿಸಿದರು. ಇಂದು ಸನಾತನ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿದೆಯೆಂದರೆ ಶಂಕರಾಚಾರ್ಯರೂ ಸೇರಿದಂತೆ ಆಚಾರ್ಯತ್ರಯರ ಕೊಡುಗೆ ಅಪಾರ ಎಂದು ವೇ.ಜಿ.ರಾಘವೇಂದ್ರ ಅಡಿಗ ಹೇಳಿದರು.
ಕೋಟೇಶ್ವರ ಶ್ರೀ ಶಂಕರ ಜಯಂತಿ ಉತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಳದಲ್ಲಿ ನಡೆದ ಶ್ರೀ ಶಂಕರ ಜಯಂತಿ ಆಚರಣೆಯಲ್ಲಿ ಉಪನ್ಯಾಸ ನೀಡಿದರು.
ಶ್ರೀ ಶಂಕರ ಜಯಂತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಚಂದ್ರಶೇಖರ ಅಡಿಗ ಪ್ರಸ್ತಾವಿಸಿ. ಕಾರ್ಯದರ್ಶಿ ಅನಸೂಯಾ ಭಟ್ ವಾರ್ಷಿಕ ವರದಿ ಓದಿದರು. ಸಮಿತಿ ಅಧ್ಯಕ್ಷ ಕೆ.ರಾಮಚಂದ್ರ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಬಡಾಮನೆ ಪದ್ಮನಾಭ ಐತಾಳ, ದೇವಳದ ತಂತ್ರಿ ವೇ.ಪ್ರಸನ್ನಕುಮಾರ ಐತಾಳ ಇದ್ದರು. ಸರೋಜಿನಿ ಅಡಿಗ, ಶಂಕರಾಚಾರ್ಯ ರಚಿತ ಜಾಗೃತ ಪಂಚಕ ಪಠಿಸಿದರು. ಪ್ರಭಾಕರ ಮಿತ್ಯಂತ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಅನಸೂಯಾ ಭಟ್ ವಂದಿಸಿದರು.
ಬಳಿಕ ಶ್ರೀ ಶಂಕರ ಭಗವತ್ಪಾದರ ಪೂಜೆ ನೆರವೇರಿಸಲಾಯಿತು. ಸಮಿತಿ ಸದಸ್ಯರು ಸ್ತೋತ್ರ ಪಠಣ, ಸೌಂದರ್ಯ ಲಹರಿ, ಲಿಂಗಾಷ್ಟಕಂ, ಶಂಕರಾಚಾರ್ಯ ಅಷ್ಟೋತ್ತರ ಶತನಾಮಾವಳಿಗಳ ಪಠಣ ನಡೆಸಿದರು.