ಬರ ಮರೆತು ಕುಣಿಯೋದರಲ್ಲಿ ಸಿಎಂ ಬ್ಯುಸಿ: ಶ್ರಿರಾಮುಲು

Sriramulu_vb_80
Published on

ವಿಜಯವಾಣಿ ಸುದ್ದಿಜಾಲ ಗದಗ
ಹಂಪಿಯಲ್ಲಿ ಇತ್ತೀಚೆಗೆ ಜರುಗಿ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಕುಣಿತಕ್ಕೆ ಗದಗ ನಲ್ಲಿ ಶ್ರೀರಾಮುಲು ಲೇವಡಿ ಮಾಡಿದ್ದಾರೆ. ಬರ ಸಂಕಷ್ಟದಲ್ಲಿ ರೈತರು ನೋವು ಅನುಭವಿಸುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ಕುಣಿದು ಕುಪ್ಪಳಿಸುತ್ತಿದ್ದಾರೆ ಎಂದು ಶ್ರೀರಾಮುಲು ವ್ಯಂಗ್ಯವಾಡಿದರು.
ರಾಜ್ಯಾದ್ಯಂತ ಬಿಜೆಪಿ ಕೈಗೊಂಡಿರುವ ಬರ ಅಧ್ಯಯನದ ಭಾಗವಾಗಿ ಗದಗ ಜಿಲ್ಲೆಯಲ್ಲಿ ಶನಿವಾರ ಬರ ಅಧ್ಯಯನಕ್ಕೆ ತೆರಳುವ ಮುನ್ನ ಮಾಧ್ಯಮದವರೊಮದಿಗೆ ಮಾತನಾಡಿದ ಅವರು, ಬರ ಹಿನ್ನೆಲೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗುಳೆ ಹೋಗುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಏನೂ ಆಗಿಲ್ಲ ಎಂಬಂತೆ ಕುಣಿದು ಕುಪ್ಪಳಿಸಿ ಸಂತೋಷದಲ್ಲಿ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡೊಸಿದರು. ಒಂದು ವೇಳೆ ಇತರೆ ಪಕ್ಷದ ಸಿಎಂ ಅಥವಾ ಸಚಿವರು ಈ ರೀತಿ ಕುಣಿದು ಕುಪ್ಪಳಿಸಿದ್ದರೆ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದರು ಎಂದು ಟೀಕಿಸಿದರು.

ತಂತ್ರಗಾರಿಕೆ:
ಐದು ವರ್ಷ ನಾನೇ ಸಿಎಂ ಎನ್ನುತ್ತಾರೆ, ಮತ್ತೊಂದೆಡೆ ಹೈಕಮಾಂಡ್​ ಹೇಳಿದ್ದಕ್ಕೆ ಬದ್ಧನಾಗಿರುತ್ತೇನೆ ಎನ್ನುತ್ತಾರೆ. ಈ ನಡುವೆ ಡಿಸಿಎಂ ಡಿ.ಕೆ. ಶಿವಕುಮಾರ್​, ಜಿ. ಪರಮೇಶ್ವರ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದೆಲ್ಲವೂ ಬರದ ಸಂಕಷ್ಟದಲ್ಲಿರುವ ಜನರನ್ನು ಬೇರೆಡೆಗೆ ಸೆಳೆಯುವ ತಂತ್ರಗಾರಿಕೆ ಆಗಿದೆ ಎಂದರು.

ಪ್ರಿಯಾಂಕ್​ ವಿರುದ್ಧ ವಾಗ್ದಾಳಿ:
ಸಬ್​ ಇನ್ಸಪೆಕ್ಟರ್​ ಪರೀಕ್ಷೆಯಲ್ಲಿ ಅಕ್ರಮ ನಡೆದಾಗ ಪ್ರಿಯಾಂಕ್​ ರ್ಖಗೆ ಕೂಗಾಡಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಈ ಮಾತನಾಡುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದರು. ಭ್ರಷ್ಟಾಚಾರ ನಡೆಸಿ, ಹಣ ಸಂಗ್ರಹಿಸಿ ಇತರೆ ರಾಜ್ಯದ ಚುನಾವಣೆಗಳಿಗೆ ಕಳಿಸಬೇಕು ಎಂದು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net