ಕಳೆಗಟ್ಟಿದ ಶ್ರೀರಾಮ ರಂಗ ಸಂಭ್ರಮ

BLY- 23-5
ಬಳ್ಳಾರಿ ನಗರದ ರಾಘವ ಕಲಾಮಂದಿರದಲ್ಲಿ ರಂಗತೋರಣದಿಂದ ಸೋಮವಾರ ರಾತ್ರಿ ನಡೆದ ಶ್ರೀರಾಮ ರಂಗ ಸಂಭ್ರಮವನ್ನು ರಾಘವ ಸ್ಮಾರಕ ಸಂಘದ ಗೌರವಾಧ್ಯಕ್ಷ ಕೆ.ಚನ್ನಪ್ಪ ಉದ್ಘಾಟಿಸಿದರು. ವಕೀಲ ವಿ.ಜನಾರ್ಧನ, ಪ್ರೊ.ಆರ್.ಭೀಮಸೇನ, ಪ್ರಭುದೇವ ಕಪ್ಪಗಲ್ಲು, ಅಡವಿಸ್ವಮಿ ಇತರರಿದ್ದರು.
Published on

ಬಳ್ಳಾರಿ : ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಯ ನಿಮಿತ್ತವಾಗಿ ದೇಶ ವಿದೇಶಗಳಲ್ಲಿ ಶ್ರೀರಾಮ ಸ್ಮರಣೆಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಪ್ರತಿ ಮನೆಯಲ್ಲಿಯೂ ಶ್ರೀರಾಮ ಪೂಜೆ, ದೀಪಾರಾಧನೆ ನಡೆಯುತ್ತಿರುವಂತೆಯೇ ಬಳ್ಳಾರಿಯಲ್ಲಿ ರಂಗತೋರಣ ಸಂಸ್ಥೆಯಿಂದ ನೃತ್ಯ, ಸಂಗೀತ-ನಾಟಕ-ಬಯಲಾಟಗಳಿಂದ ಶ್ರೀರಾಮ ರಂಗ ಸಂಭ್ರಮ ಆಚರಿಸುತ್ತಿರುವುದು ಪ್ರಸಂಶನೀಯವೆಂದು ರಾಘವ ಸ್ಮಾರಕ ಸಂಘದ ಗೌರವಾಧ್ಯಕ್ಷ ಕೆ.ಚನ್ನಪ್ಪ ತಿಳಿಸಿದರು.

ಇಲ್ಲಿನ ರಾಘವ ಕಲಾಮಂದಿರದಲ್ಲಿ ರಂಗತೋರಣದಿಂದ ಸೋಮವಾರ ರಾತ್ರಿ ನಡೆದ ಶ್ರೀರಾಮ ರಂಗ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲ ವಿ.ಜನಾರ್ಧನ ಮಾತನಾಡಿ, ಇಂದಿನ ಶ್ರೀರಾಮ ಮಂದಿರ ಪ್ರತಿಷ್ಠಾಪನಾ ಕಾರ್ಯಕ್ಕಾಗಿ ನೂರಾರು ವರ್ಷಗಳ ಕಾಲ ಹೋರಾಟ ನಡೆದಿದ್ದು, ನ್ಯಾಯದೇವತೆಯೂ ಧರ್ಮದೇವತೆಯಾಗಿ ತೀರ್ಪು ನೀಡಿದ್ದು ಸ್ಮರಣೀಯ. ಪ್ರಧಾನಿ ನರೇಂದ್ರ ಮೋದಿ ಅವರು ದೀಕ್ಷಾಬದ್ಧರಾಗಿ ಶ್ರೀರಾಮನ ಪ್ರತಿಷ್ಠಾಪನೆ ಕೈಗೊಂಡಿದ್ದು ಎಲ್ಲರಿಗೂ ಆದರ್ಶಪ್ರಾಯವೆಂದರು.

ಹಿರಿಯ ಬಯಲಾಟ ಕಲಾವಿದ ಹನುಮಾವಧೂತರು ಮಾತನಾಡಿ, ಎಲ್ಲ ಜಾತಿ ಮತಗಳ ಭೇದ, ರಾಜ್ಯ- ರಾಷ್ಟ್ರಗಳ ಭೇದವನ್ನೂ ಮೀರಿ ಕೂಲಿಯವರಿಂದ ಸಿನಿಮಾನಟ, ರಾಜಕಾರಣಿಗಳಲ್ಲರನ್ನೂ ಒಟ್ಟುಗೂಡಿಸಿದ್ದು ಶ್ರೀರಾಮನ ಮಹಿಮೆ ಎಂದರು.

ಪ್ರೊ.ಆರ್.ಭೀಮಸೇನ ಮಾತನಾಡಿ, ಶ್ರೀರಾಮ ಸಕಲ ಸದ್ಗುಣಗಳ ಧಾಮ, ಅಮ್ಮನಂತೆಯೇ ಆಪ್ತ, ಅವನು ಸಕಲ ಸಹೋದರರನ್ನು ಒಟ್ಟುಗೂಡಿಸಿಕೊಂಡಂತೆ ಪ್ರತಿ ಮನೆಯೂ ಒಟ್ಟು ಕುಟುಂಬವಾಗಿ ಬಾಳಲಿ ಎಂದು ಆಶಿಸಿದರು.

ಶ್ರೀನಿಧಿ ಆರ್ಟ್ಸ್ ಟ್ರಸ್ಟ್ ಅವರಿಂದ ಮನಸೆಳೆಯುವ ನೃತ್ಯ ವೈವಿಧ್ಯದ ಅಯೋಧ್ಯಾರಾಮ ನೃತ್ಯರೂಪಕ ಜನಮನ ಸೆಳೆಯಿತು. ನಂತರ ಮುದ್ದಟನೂರು ಎಚ್.ತಿಪ್ಪೇಸ್ವಾಮಿ ಅವರ ಸಂಗೀತ ಮತ್ತು ನಿರ್ದೇಶನದ ‘ರಾಮ ರಾವಣ ಯುದ್ಧ’ ಬಯಲಾಟವನ್ನು ಸಿರಿಗೇರಿಯ ಧಾತ್ರಿ ರಂಗಸಂಸ್ಥೆ ಕಲಾವಿದರು ಪ್ರದರ್ಶಿಸಿದರು. ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ಅಡವಿಸ್ವಮಿ, ರವಿಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net