

ಗದಗ: ಜಿಲ್ಲಾ ಬ್ರಾಹ್ಮಣ ಸಮಾಜದಿಂದ, ಮರಾಠ ಮಣಡಳ, ಗಜಾನನ ಸಮೀತಿ ಸಹಯೋಗದೊಂದಿಗೆ ಜ. 22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ನಗರದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಮನಾಪ ಜಪ, ರಾಮತಾರಕ ಹೋಮ, ಭಜನೆ, ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಕೇಂದ್ರ ಸರ್ಕಾರ ಈಗಾಗಲೇ ದೇಶಾಧ್ಯಂತ ಅರ್ಧ ರಜೆ ಘೋಷಿಸಿದೆ. ರಾಜ್ಯ ಸರ್ಕಾರವೂ ಕೂಡ ಅರ್ಧ ರಜೆ ಘೋಷಣೆ ಮಾಡಬೇಕು ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ್ ಕುಲಕರ್ಣಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ವೇ. ಮೂ. ರತ್ನಾಕರಭಟ್ಟರು ಮಾತನಾಡಿ, ಜ. 22ರಂದು ಮುಂಜಾನೆ 8ಗಂಟೆಗೆ ಮೇರವಣಿಗೆ, ಹೋಮ ಕಾರ್ಯಕ್ರಮ, ಆರತಿ ಕಾರ್ಯಕ್ರಮಗಳನ್ನು ಲೋಕಕಲ್ಯಾಣಕ್ಕಾಗಿ ಮಾಡಲಾಗುತ್ತಿದೆ. ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ನಿಮಿತ್ಯ ನಗರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭಕ್ತರು ಆಗಮಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕು ಎಂದು ವಿನಂತಿಸಿದರು.
ಅಯೋಧ್ಯೆಯ ಉದ್ಘಾಟನೆಯು ರಾಷ್ಟ್ರೀಯ ಹಬ್ಬವಾಗಿ ಹೊರಹೊಮ್ಮುತ್ತಿದೆ. ನಗರದ ವಕೀಲಚಾಳದ ಶ್ರೀರಾಮ ಚಂದ್ರ, ಲಕ್ಷ್ಮೀ, ಗಣಪತಿ ದೇವಸ್ಥಾನದಿಂದ ಪಲ್ಲಕ್ಕಿ ಸೇವಾ ಕಾರ್ಯಕ್ರಮ ನಡೆಯಲಿದ್ದು, ನಾಟಕ ಹಾಗೂ ಹನುಮಾನ್ ಚಾಲಿಸ ಪಠಣ ನಡೆಯಲಿದೆ. ಸಾಯಾಂಕಾಲ ಶ್ರೀರಾಮ ದೀಪಾವಳಿಯನ್ನು ನಮ್ಮ ಸಮುದಾಯದ ಮಹಿಳೆಯರು ಪ್ರತಿ ಮನೆಗೆ ತೇರಳಿ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ರಾಮಚಂದ್ರ ಮೋನೆ ಹೇಳಿದರು.
ಜ. 22ರ ಭಾರತ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ದಿನವಾಗಿದೆ. ಶ್ರೀ ರಾಮ ಮಂದಿರ ನಿರ್ಮಾಣದ ಉದ್ಘಾಟನೆ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಹಿಂದೂಗಳೆಲ್ಲರೂ ಸಂಭ್ರಮ ಸಡಗರದಿಂದ ಶ್ರೀರಾಮ ಉದ್ಘಾಟನೆ ಕಾರ್ಯಕ್ರಮವನ್ನು ಆಚರಿಸೋಣ, ಶ್ರೀರಾಮನೇ ಹಿಂದೂಗಳನ್ನು ಎಚ್ಚರಿಸಲು ಬರುತ್ತಿದ್ದು, ನಮ್ಮ ದೇಶ ರಾಮರಾಜ್ಯವಾಗಲಿ. ಅಂದಿನ ನಮ್ಮ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ಪರು ಭಾಗವಹಿಸಬೇಕು ಎಂದು ದೀರಜ್ ಹುಯಿಲಗೋಳ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪ್ರಕಾಶ್ ಅಂಗಡಿ, ಕೆ ಡಿ ನಾಡಗೇರ, ರವಿ ಪೂಜಾರ, ಸುನೀಲ್ ತೆಂಬದಮನಿ, ಪುರಾಣಿಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.