ವಿಜೃಂಭಣೆಯಿಂದ ನೆರವೇರಿದ ಶ್ರೀ ಕೋದಂಡರಾಮಚಂದ್ರ ಬ್ರಹ್ಮರಥೋತ್ಸವ

19 ckm 3
ಚಿಕ್ಕಮಗಳೂರು ಹೊರವಲಯದ ಹಿರೇಮಗಳೂರಿನ ಶ್ರೀಕೋದಂಡರಾಮೇಶ್ವರ ದೇವಾಲಯದ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
Published on

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಹಿರೇಮಗಳೂರು ಕೋದಂಡರಾಮಚಂದ್ರ ಬ್ರಹ್ಮರಥೋತ್ಸವ ಮಂಗಳವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮಧ್ಯಾಹ್ನದ ಹೊತ್ತಿಗೆ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಜನರು ದೇವಾಲಯಕ್ಕೆ ಆಗಮಿಸಿದರು. ಬರುವ ಭಕ್ತರಿಗೆ ತಣ್ಣನೆಯ ಪಾನಕದ ವ್ಯವಸ್ಥೆಯನ್ನು ಮಾಡಲಾಗಿತ್ತು. ಉರಿಬಿಸಿಲಿನಲ್ಲಿ ಬಂದವರು ಪಾನಕವನ್ನು ಸವಿದು ದೇಹವನ್ನು ತಂಪಾಗಿಸಿಕೊಂಡು ದೇವಾಲಯದತ್ತ ಮುಖಮಾಡಿದರು.
ದೇವಾಲಯದಿಂದ ಅಡ್ಡೆಯನ್ನು ಹೊರಗೆ ತರಲಾಯಿತು. ನಾದಸ್ವರದೊಂದಿಗೆ ದೇವರನ್ನು ದೇಗುಲದ ಒಂದು ಸುತ್ತು ಪ್ರದಕ್ಷಿಣೆಹಾಕಲಾಯಿತು. ಬಳಿಕ ರಥದ ಮುಂದೆ ಬಾಳೆಕಂದನ್ನು ನೆಡಲಾಯಿತು. ತದಾದನಂತರ ಹೂವಿನಂದ ಅಲಂಕೃತಗೊಂಡಿದ್ದ ರಥದೊಳಗೆ ದೇವರಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಹಿರೇಮಗಳೂರು ಗ್ರಾಮಸ್ಥರು ನೀಡಿದ ಬೃಹತ್‌ಹಾರವನ್ನು ತೇರಿಗೆ ಕಟ್ಟಲಾಯಿತು. ನಂತರ ದೇವರಿಗೆ ಆರತಿಯನ್ನು ಬೆಳಗಿದ ಮೇಲೆ ಕನ್ನಡಪೂಜಾರಿ ಹಿರೇಮಗಳೂರು ಕಣ್ಣನ್ ರಥದ ಕೆಳಗಿದ್ದವರಿಗೆ ಹೂವಿನ ಹಾರವನ್ನು ಹಾಕಿದರು. ಇದಾದ ಬಳಿಕ ರಥವನ್ನು ಎಳೆಯಲು ಭಕ್ತರು ಮುಂದಾಗುತ್ತಿದ್ದಂತೆ ಅಲ್ಲಿಂದ ಭಕ್ತ ಸಮೂಹ ರಥಕ್ಕೆ ಕೈಮುಗಿದು ಕೋದಂಡರಾಮನ ನಾಮಸ್ಮರಣೆ ಮಾಡಿದರು.
ಬ್ರಹ್ಮ ರಥವನ್ನು ಕೆಲ ಭಕ್ತರು ಎಳೆದರೆ ರಸ್ತೆಯ ಬದಿಯಲ್ಲಿ ನಿಂತಿದ್ದ ಭಕ್ತರು ಭಜನೆ ಮಾಡಿದರು. ರಥದೊಳಗಿವದ್ದವರು ಹೂವಿನ ಪ್ರಸಾದವನ್ನು ಭಕ್ತರಿಗೆ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಥದ ತುದಿಗೆ ಕಟ್ಟಲಾಗಿದ್ದ ಕಲಶಕ್ಕೆ ಭಕ್ತರು ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು.
ತಹಸೀಲ್ದಾರ್ ಸುಮಂತ್ ನೇತೃತ್ವದಲ್ಲಿ ವಿವಿಧ ಕಾರ್ಯಗಳು ನೆರವೇರಿದವು. ರಥ ಸಾಗುತ್ತಿದ್ದಂತೆ ವಾದ್ಯಕ್ಕೆ ಕೆಲವರು ಹೆಜ್ಜೆಹಾಕಿದರು. ಶಾಸಕ ಎಚ್.ಡಿ.ತಮ್ಮಯ್ಯ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net