

ಕಡೂರು: ಸಿಂಗಟಗೆರೆ ಶ್ರೀ ಕಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಮಧ್ಯಾಹ್ನ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ದೇವಾಲಯದಲ್ಲಿ ನಿತ್ಯ ಹೋಮ, ರಥಾಧಿ ದೇವತಾಹೋಮ, ರಥ ಸಂಪ್ರೋಕ್ಷಣೆ, ಬಲಿಪ್ರದಾನ, ಮಧ್ಯಾಹ್ನ ಕೃಷ್ಣ ಗಂಧೋತ್ಸವದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಆಂಜನೇಯಸ್ವಾಮಿಯೊಂದಿಗೆ ಪಾರ್ವತಿ ಸಮೇತ ಕಲ್ಲೇಶ್ವರ ಸ್ವಾಮಿ ಉತ್ಸವ ನಡೆಸಿ ರಥದಲ್ಲಿ ಪ್ರತಿಷ್ಠಾಪಿಸಿ ರಥ ಎಳೆದು ಸಂಭ್ರಮಿಸಿದರು. ರಥೋತ್ಸವ ವೇಳೆ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಕೆಲಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು.
ರಥದ ಸುತ್ತ ವಿವಿಧ ಗ್ರಾಮದ ಭಕ್ತರು ಪಾನಕದ ಗಾಡಿಗಳನ್ನು ಓಡಿಸಿ ಸಂಭ್ರಮಿಸಿದರು. ಹರಕೆ ಹೊತ್ತಿದ್ದ ಭಕ್ತರು ಸ್ವಾಮಿಯ ರಥ ಎಳೆಯುವ ವೇಳೆ ಕಾಳುಮೆಣಸು, ಏಲಕ್ಕಿ, ಬಾಳೆಹಣ್ಣುಗಳನ್ನು ಎರಚಿ ಭಕ್ತಿ ಸಮರ್ಪಿಸಿದರು. ಶಾಸಕ ಕೆ.ಎಸ್.ಆನಂದ್ ಕ್ಷೇತ್ರದ ಜನತೆ ಪರವಾಗಿ ರಥಕ್ಕೆ ಪೂಜೆ ಸಲ್ಲಿಸಿದರು. ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ದೇವರಿಗೆ ಪೂಜೆ ಸಲ್ಲಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಬಿ.ಕೆ.ನಾಗರಾಜಪ್ಪ ಮಾತನಾಡಿ, ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಲಿನ ರಾಜಗೋಪುರ ನಿರ್ಮಿಸಲಾಗುತ್ತಿದೆ. ಗೋಪುರ ನಿರ್ಮಾಣಕ್ಕೆ ಭಕ್ತರು ಸಹಕರಿಸುವಂತೆ ಮನವಿ ಮಾಡಿದರು.
ರಥೋತ್ಸವ ಕಾರ್ಯದಲ್ಲಿ ಸುತ್ತಮುತ್ತಲ ಏಳು ಹಳ್ಳಿಗಳ ಗ್ರಾಮಸ್ಥರು ತೊಡಗಿಸಿಕೊಂಡಿದ್ದರು. ಹೊರ ಜಿಲ್ಲೆಗಳ ಭಕ್ತರೂ ಆಗಮಿಸಿದ್ದರು. ದೇವಾಲಯದಿಂದ ದಾಸೋಹದ ವ್ಯವಸ್ಥೆ ಮಾಡಲಾಯಿತು.
ದೇವಾಲಯ ಸಮಿತಿ ಕಾರ್ಯದರ್ಶಿ ಎಸ್.ಕೆ.ರಮೇಶ್, ಸದಸ್ಯರಾದ ಎನ್.ಮೂರ್ತಿ, ಶಿವಮೂರ್ತಿ, ದೇವರಾಜು, ಕಲ್ಲೇಶಪ್ಪ, ಕುಮಾರಪ್ಪ ಇದ್ದರು.