

ಬೆಟ್ಟದಪುರ: ಕೂರಗಲ್ಲು ಹೊರವಲಯದಲ್ಲಿರುವ ದೊಡ್ಡಮ್ಮ ಹಾಗೂ ಚಿಕ್ಕಮ್ಮ ತಾಯಿ ಹಬ್ಬವನ್ನು ಎಲ್ಲ ಕೋಮಿನ ಜನರು ಒಗ್ಗೂಡಿ ಶುಕ್ರವಾರ ಸಂಭ್ರಮದಿಂದ ಆಚರಣೆ ಮಾಡಿದರು.
ದೊಡ್ಡಮ್ಮ ಹಾಗೂ ಚಿಕ್ಕಮ್ಮ ತಾಯಿ ಮೂಲಸ್ಥಾನದಿಂದ ತಾಯಿಗೆ ಸಂಬಂಧಪಟ್ಟ ಒಡವೆ, ಆಭರಣಗಳನ್ನು, ಬೆಟ್ಟದ ತಪ್ಪಲಿನಲ್ಲಿರುವ ಬಸಪ್ಪನ ಕೆರೆಯಲ್ಲಿ ಶುಚಿಗೊಳಿಸಿ, ಬಳಿಕ ಉತ್ಸವ ಮೂರ್ತಿಗಳನ್ನು ವಾದ್ಯ ಮೇಳಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿದ ನಂತರ ದೇವಾಲಯಕ್ಕೆ ತರಲಾಯಿತು. ಮೆರವಣಿಗೆಯುದ್ದಕ್ಕೂ ಯುವಕರು ತಮಟೆ ಸದ್ದಿಗೆ ಹೆಜ್ಜೆಯಾಕುತ್ತ ಸಿಡಿಮದ್ದು ಸಿಡಿಸುತ್ತ ಸಂಭ್ರಮಿಸಿದರು.
ಗ್ರಾಮಸ್ಥರು ಹಾಗೂ ಮುತ್ತೈದೆಯರು ಪೂಜೆ ಮಾಡಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು. ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ತಳಿರು, ತೋರಣಗಳನ್ನು ಕಟ್ಟಲಾಗಿತ್ತು. ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೂ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯಿತು, ಬೆಟ್ಟದಪುರ, ಭುವನಹಳ್ಳಿ, ಸೇರಿದಂತೆ ಅಕ್ಕಪಕ್ಕದ ಗ್ರಾಮದವರು ಕುಟುಂಬ ಸಮೇತರಾಗಿ ಆಗಮಿಸಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ರಾತ್ರಿ 12 ಗಂಟೆಗೆ ಉತ್ಸವ ಮೂರ್ತಿಗಳನ್ನು ದೇವಾಲಯಕ್ಕೆ ತರಲಾಯಿತು. ಹರಕೆ ಹೊತ್ತ ಭಕ್ತರು ಕೊಂಡ ಹಾಯುವ ಮೂಲಕ ಹರಕೆ ಸಮರ್ಪಿಸಿದರು. ಶನಿವಾರ ಮುಂಜಾನೆ 2 ಗಂಟೆಯವರೆಗೂ ದೇವಾಲಯದಲ್ಲಿ ವಿಶೇಷ ಪೂಜೆ ಜರುಗಿದವು. ಬಳಿಕ ಉತ್ಸವ ಮೂರ್ತಿಗಳನ್ನು ಮೂಲಸ್ಥಾನಕ್ಕೆ ತರಲಾಯಿತು.