

ತುಮಕೂರು : ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾತ್ ಲ್ಯಾಬ್ ಸ್ಥಾಪಿಸಲಾಗಿದ್ದು, ಹೃದ್ರೋಗ ಪತ್ತೆ ಹಾಗೂ ಚಿಕಿತ್ಸೆಗೆ ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿಯಂತಹ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಶ್ರೀದೇವಿ ಶಿಕ್ಷಣ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್ ಹೇಳಿದರು.
ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ ಆವರಣದಲ್ಲಿ ಸೋಮವಾರ ಸುಸಜ್ಜಿತ ಕ್ಯಾತ್‌ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು, ಹೃದ್ರೋಗ ಸಮಸ್ಯೆ ಕಂಡುಬಂದ ತಕ್ಷಣವೇ ತಪಾಸಣೆ ನಡೆಸಿ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಿದ್ದು ಬೆಂಗಳೂರಿಗೆ ತೆರಳುವ ಅಗತ್ಯ ಇರುವುದಿಲ್ಲ ಎಂದರು.
ವೈದ್ಯಕೀಯ ಶಿಕ್ಷಣ ದಿನದಿಂದ ದಿನಕ್ಕೆ ಬದಲಾವಣೆ ಹೊಂದುತ್ತಿದ್ದು ಈ ಬದಲಾವಣೆಗೆ ಆಧುನಿಕ ಯಂತ್ರೋಪಕರಣಗಳು ಕಾರಣವಾಗಿವೆ. ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಗುರುತಿಸುವ ಹಾಗೂ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ನೂತನ ವಿಭಾಗಗಳನ್ನು ಶ್ರೀದೇವಿ ಆಸ್ಪತ್ರೆಯಲ್ಲಿ ಪ್ರಾರಂಭಿಸಿ ಹೃದ್ರೋಗಿಗಳಿಗೆ ಚಿಕಿತ್ಸೆ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಈ ಅತ್ಯಾಧುನಿಕ ಚಿಕಿತ್ಸೆಯು ವಿಶೇಷವಾಗಿ ಗ್ರಾಮೀಣರಿಗೆ ವರದಾನವಾಗಲಿದೆ ಎಂದು ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಆರ್.ಹುಲಿನಾಯ್ಕರ್ ತಿಳಿಸಿದರು.
ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯಲ್ಲಿ ಹೃದಯ ರೋಗ ಚಿಕಿತ್ಸಾ, ಅತ್ಯಾಧುನಿಕ ಕ್ಯಾತ್‌ಲ್ಯಾಬ್, ಸುಸಜ್ಜಿತ ಸಿಸಿಯು ಘಟಕ ಇದ್ದು ದಿನದ 24 ಗಂಟೆಯೂ ಚಿಕಿತ್ಸೆ ದೊರೆಯಲಿದೆ. ಗ್ರಾಮೀಣ ರೋಗಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಹೃದಯ ರೋಗಕ್ಕೆ ಸಂಬಂಧಿಸಿದ ಪರೀಕ್ಷೆ ನಡೆಸಲಾಗುತ್ತದೆ. ಆರೋಗ್ಯ ಕರ್ನಾಟಕ, ಆಯುಷ್ಮಾನ್ ಭಾರತ್, ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರೋಗಿಗಳಿಗೂ ಸಹ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯ ಎಂದು ಶ್ರೀದೇವಿ ಆಸ್ಪತ್ರೆ ಹೃದ್ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಎಸ್.ಸುರೇಶ್ ಹೇಳಿದರು.