ದೇವಿಕೆರೆಯಲ್ಲಿ ಶ್ರೀ ಚಾಮುಂಡೇಶ್ವರಿ ತೆಪ್ಪೋತ್ಸವ

mysore
Published on

ಮೈಸೂರು: ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಶ್ರೀ ಚಾಮುಂಡೇಶ್ವರಿ ತೆಪ್ಪೋತ್ಸವವು ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಈ ಕ್ಷಣಕ್ಕಾಗಿ ಕಾದು ಕುಳಿತಿದ್ದ ಭಕ್ತರು ಕೆರೆಯ ನೀರಿನ ಮೇಲೆ ದೀಪಾಲಂಕಾರಕೃತ ತೆಪ್ಪದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಚಾಮುಂಡೇಶ್ವರಿ ಮೂರ್ತಿಗೆ ಕೈಮುಗಿದು ಅಧಿದೇವತೆಯ ಕೃಪೆಗೆ ಪಾತ್ರರಾದರು.

ಬುಧವಾರ ಬೆಟ್ಟದಲ್ಲಿ ನಡೆದ ಶ್ರೀ ಚಾಮುಂಡೇಶ್ವರಿ ದೇವಿಯ ರಥೋತ್ಸವದಲ್ಲಿ ಸಹ್ರಸಾರು ಜನರು ಪಾಲ್ಗೊಂಡಿದ್ದರು. ದೇವಿಕೆರೆಯ ಸುತ್ತಲೂ ನೆರೆದಿದ್ದ ಭಕ್ತರು ದೇವಿಗೆ ಜೈಕಾರ ಹಾಕಿ ಪ್ರಾರ್ಥಿಸುವ ಮೂಲಕ ಭಕ್ತಿಭಾವ ಮೆರೆದರು. ಬಹಳಷ್ಟು ಭಕ್ತರು ಈ ಸಂಭ್ರಮದ ಕ್ಷಣವನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿದರು.

ಇದಕ್ಕೂ ಮುನ್ನ ದೇವಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಿಯ ತೀರ್ಥಸ್ನಾನ ಹಾಗೂ ನೈವೇದ್ಯ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಸಂಜೆ 7ಕ್ಕೆ ಪ್ರಾರಂಭವಾದ ಉತ್ಸವದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿ ಸ್ವಸ್ಥಾನಕ್ಕೆ ತರಲಾಯಿತು. ಪ್ರತಿ ವರ್ಷ ದೇವಿಯ ಉತ್ಸವ ಮೂರ್ತಿಯನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಗುತ್ತಿತ್ತು. ಈ ಬಾರಿ ಭಕ್ತರಿಗೆ ನಿರಾಸೆ ಉಂಟು ಮಾಡಿತು.

ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ವಾಪಸ್ ದೇವಸ್ಥಾನಕ್ಕೆ ತಂದು ವಿವಿಧ ಪೂಜಾ ಕೈಂಕರ್ಯಗಳನ್ನು ಸಲ್ಲಿಸಲಾಯಿತು. ದಸರಾ ಅಂಗವಾಗಿ ಬೆಟ್ಟದಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.

ಎಲ್ಲೆಡೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ, ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಇದ್ದರು. ಮನೆಯಲ್ಲಿ ಮಗು ಜನಿಸಿದ ಸೂತಕದ ಕಾರಣಕ್ಕೆ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಷಿಕಾ, ಪ್ರಮೋದಾದೇವಿ ಒಡೆಯರ್ ಪಾಲ್ಗೊಂಡಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net