

ವಿಜಯವಾಣಿ ಸುದ್ದಿಜಾಲ ಉಡುಪಿ
ನಮ್ಮ ಧರ್ಮದ ಕುರಿತು ಅಭಿಮಾನ ಬೆಳೆಸಿಕೊಂಡರೆ ಇತರರ ದಾಳಿ, ಆಕ್ರಮಣ ಕಡಿಮೆಯಾಗುತ್ತದೆ. ದೇಹಕ್ಕೆ ರೋಗ ಬಂದಾಗ ವೈರಾಣು ಸಾಯಿಸುವ ಬದಲು ದೇಹಕ್ಕೆ ಪ್ರತಿರೋಧಕ ಶಕ್ತಿ ನೀಡಬೇಕು. ಅದರಂತೆ ವಿಶ್ವದ ಎಲ್ಲ ಸಮಸ್ಯೆಗಳ ನಿವಾರಣೆಗೆ ಭಗವದ್ಗೀತೆಯೇ ಪ್ರತಿರೋಧಕ ಶಕ್ತಿಯಾಗಿದೆ. ಭಗವದ್ಗೀತೆಯಿಂದ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ. ಜಗತ್ತನ್ನೇ ಸುಸ್ಥಿತಿಯಲ್ಲಿ ಇಡುವ ಗೈಡ್ ಭಗವದ್ಗೀತೆಯಾಗಿದೆ ಎಂದು ಪುತ್ತಿಗೆ ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದಿರುವ ಬೃಹತ್ ಗೀತೋತ್ಸವದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಎಂಎಲ್ಸಿ ಗೋ.ಮಧುಸೂದನ್ ವಿರಚಿತ ಶ್ರೀ ಭಗವಾನುವಾಚ ಗ್ರಂಥ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ವಿಶ್ವದ ಶಾಂತಿಗೆ ಭಗವದ್ಗೀತೆಯೇ ಆಸರೆ. ಮಾನವ ಕುಲಕ್ಕೆ ಗೀತೆಯ ಸಾರ ಅರ್ಥವಾದರೆ ಎಲ್ಲ ಸಮಸ್ಯೆಗಳಿಂದಲೂ ಹೊರ ಬರಲು ಸಾಧ್ಯ. ಗೀತೆಯ ಅನುಷ್ಠಾನದಿಂದ ವೈಯಕ್ತಿಕ, ಸಾಮಾಜಿಕ, ರಾಜಕೀಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಹೀಗೆ ಎಲ್ಲ ಸಮಸ್ಯೆಗೂ ಪರಿಹಾರ ಗೀತೆಯಲ್ಲಿದೆ. ಅಂತಹ ಭಗವದ್ಗೀತೆಯ ಅಂಶವನ್ನೇ ಒಂಗೊಂಡಿರುವ ಶ್ರೀ ಭಗವಾನುವಾಚ ಗ್ರಂಥ ಬಿಡುಗಡೆ ಆಗುತ್ತಿರುವುದು ಶ್ರೀಕೃಷ್ಣನಿಗೂ ಸಂತಸ ತಂದಿದೆ. ಡಿ.21ರ ಅಂತಾರಾಷ್ಟ್ರೀಯ ಧ್ಯಾನ ದಿನಾಚರಣೆಯಂದೇ ಮಧುಸೂದನ್ ಅವರ ಪುಸ್ತಕ ಲೋಕಾರ್ಪಣೆ ಆಗಿರುವುದು ಐತಿಹಾಸಿಕ ದಿನವಾಗಿದೆ ಎಂದರು.
ಗ್ರಂಥ ಪರಿಚಯ ಮಾಡಿದ ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ಉಪನಿರ್ದೇಶಕ ಡಾ. ಟಿ.ವಿ. ಸತ್ಯನಾರಾಯಣ ಮಾತನಾಡಿ, ಭಗವಂತನ ಒಲುಮೆ ಇದ್ದರೆ ಎಲ್ಲ ಕಾರ್ಯಗಳಲ್ಲೂ ಯಶಸ್ಸು ಸಾಧ್ಯ. ಶ್ರೀಕೃಷ್ಣನ ಉವಾಚ (ಮಾತು) ಆಗಿರುವ ಭಗವದ್ಗೀತೆಯ ಎಲ್ಲ 700 ಶ್ಲೋಕಗಳ ತಾತ್ಪರ್ಯ, ಅರ್ಥಾನುಸಾರ ವಿವರಿಸಿ ಗೋ.ಮಧುಸೂದನ್ 406 ಪುಟಗಳ ಶ್ರೀ ಭಗವಾನುವಾಚ ಪುಸ್ತಕ ಬರೆದಿದ್ದಾರೆ ಎಂದರು.
ಮಂಗಳೂರಿನ ಉದ್ಯಮಿಗಳಾದ ಆರೂರು ಕಿಶೋರ್ ರಾವ್, ವಿಶ್ವನಾಥ ಭಟ್ ಪಾದೂರು ಇವರಿಗೆ ಸುಗುಣೇಂದ್ರ ಶ್ರೀ ಹಾಗೂ ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀಗಳು ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ವಿಜಯವಾಣಿ ಮಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕ ಸುರೇಂದ್ರ ವಾಗ್ಲೆ, ಮೈಸೂರಿನ ಚಿತ್ರ ಕಲಾವಿದ ಗಂಜೀಫ್ಹಾ ರಘುಪತಿ ಭಟ್, ಪುಸ್ತಕ ಪ್ರಕಾಶಕ ರಾಕೇಶ ರಾಜೇ ಅರಸ್, ಗ್ರಂಥ ಮುದ್ರಕ ಜೆ.ಬಿ. ಪಟ್ಟಾಭಿ, ಪತ್ರಿಕಾ ಅಂಕಣಕಾರ ಮೈಸೂರಿನ ಡಾ. ವಿ.ರಂಗನಾಥ್ ಉಪಸ್ಥಿತರಿದ್ದರು.
ಮಠದ ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ದಿವಾನ ನಾಗರಾಜ್ ಆಚಾರ್ಯ, ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ್ ಆಚಾರ್ಯ, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಇತರರು ಸಹಕರಿಸಿದರು.
ಶೃುತಿ ಆದ್ಯಾ ಪ್ರಾರ್ಥಿಸಿದರು. ಗೋ.ಮಧುಸೂದನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅನಿಲ್ ರಾವ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವಾಸ್ ನಾಡಿಗ ವಂದಿಸಿದರು.
ಶ್ರೀ ಭಗವಾನುವಾಚ ಪುಸ್ತಕ ಬರೆದಿದ್ದಾರೆ. ಭಗವದ್ಗೀತೆಯಿಂದ ಮಾತ್ರ ಸಮಾಜದಲ್ಲಿ ಸಾಮರಸ್ಯ ಕಂಡುಬರಲು ಸಾಧ್ಯ ಎಂದರು.
ಯಾವುದೇ ಪುಸ್ತಕ ಅಥವಾ ಗ್ರಂಥ ಬಿಡುಗಡೆಯನ್ನು ಲೋಕಾರ್ಪಣೆ ಎನ್ನುತ್ತಾರೆ. ಆದರೆ, ನನ್ನ ಪುಸ್ತಕ ಕೃಷ್ಣಾರ್ಪಣವಾಗಿದೆ. ಭಗವಂತನ ಮಾತುಗಳ ಪುಸ್ತಕವಿದು. ಇದರಲ್ಲಿ ಯಾವುದೇ ಕಾಪಿ ರೈಟ್ ಇಲ್ಲ. ಗೀತಾ ಜಯಂತಿ ದಿನದಿಂದ ಬರೆಯಲು ಆರಂಭಿಸಿದೆ. ಭಗವಂತ ಹೇಳಿದ, ನಾನು ಬರೆದೆ ಅಷ್ಟೇ. | ಗೋ.ಮಧುಸೂದನ್. ಮಾಜಿ ಎಂಎಲ್ಸಿ