ನಾಳೆ ಡಾ.ಶಿವಕುಮಾರಸ್ವಾಮೀಜಿ 115ನೇ ಜನ್ಮದಿನ ; ಗುರುವಂದನಾ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ

30TMK_MATT_Siddate
Published on

ತುಮಕೂರು : ಡಾ.ಶಿವಕುಮಾರ ಸ್ವಾಮೀಜಿ 115ನೇ ಜನ್ಮದಿನದ ಅಂಗವಾಗಿ ಏ.1ರಂದು ಶ್ರೀಮಠದಲ್ಲಿ ನಡೆಯಲಿರುವ ಗುರುವಂದನಾ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಡಾ.ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿ ಮೂರು ವರ್ಷ ಕಳೆದಿದ್ದು, ಆಶೀರ್ವಾದ ಪಡೆಯಲು ಗದ್ದುಗೆಗೆ ಭಕ್ತರ ದಂಡು ಹರಿದುಬರಲಿದೆ. ರಾಜಕೀಯ ಪಕ್ಷದ ಮುಖಂಡರ ದಂಡೂ ಶ್ರೀಮಠದಲ್ಲಿರಲಿದೆ.

ಕೇಂದ್ರ ಸಚಿವ ಅಮಿತ್‌ಷಾ, ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಸೇರಿ ಸಾಕಷ್ಟು ಮುಖಂಡರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಸ್ವಾಗತಕ್ಕೆ ಆಯಾ ಪಕ್ಷದ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ. ಗುರುವಂದನೆ ಕಾರ್ಯಕ್ರಮದಲ್ಲಿ 2 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಎಲ್ಲರಿಗೂ ಸಿಹಿಯೂಟದ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವರ ಆಗಮನದ ಹಿನ್ನೆಲೆಯಲ್ಲಿ ಬಂದೋಬಸ್ತ್ ಇರಲಿದ್ದು ಭಕ್ತರ ವಾಹನಗಳು ದೇವರಾಯಪಟ್ಟಣದ ಕಡೆಯಿಂದ ಮಠಕ್ಕೆ ತಲುಪಬಹುದು.

ಶ್ರೀಮಠದಲ್ಲಿ ಏ.1ರಂದು ಕಾರ್ಯಕ್ರಮದ ಉಸ್ತುವಾರಿಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಹಿಸಿಕೊಂಡಿದ್ದು, ವೇದಿಕೆಗೆ ‘ನಡೆದಾಡುವ ಬಸವ ಭಾರತ’ ಎಂದು ಹೆಸರಿಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ ಹಾಗೂ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಪರಿಶೀಲನೆ ನಡೆಸಿದರು.

ಬಸವ ಭಾರತ ಸಂಗೀತ ಕಾರ್ಯಕ್ರಮ! : ಶುಕ್ರವಾರ ಬೆಳಗ್ಗೆ 10.45ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1ರ ವರೆಗೆ 2 ಗಂಟೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಗೃಹ ಸಚಿವ ಅಮಿತ್‌ಷಾ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು ನಂತರ ವೇದಿಕೆಗೆ ಆಗಮಿಸಲಿದ್ದಾರೆ. ಸಂಜೆ 5ಕ್ಕೆ ಸಂಗೀತ ನಿರ್ದೇಶಕ ಹಂಸಲೇಖ, ವಿಜಯ್ ಪ್ರಕಾಶ್ ಅವರ ಬಸವ ಭಾರತ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. 100 ಗಾಯಕರು, 150 ಕಲಾವಿದರು ಮೂರು ಗಂಟೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಬೂಂದಿ, ಪಾಯಸ ಸಿದ್ಧ ; ಲಕ್ಷಾಂತರ ಭಕ್ತರಿಗೆ ಸಿಹಿಯೂಟ ಇರಲಿದೆ, ಕಳೆದೊಂದು ವಾರದಿಂದ ನೂರಾರು ಬಾಣಸಿಗರು ಬೂಂದಿ, ಮಾಲದಿ, ಪಾಯಸ ಸೇರಿ ವಿವಿಧ ಸಿಹಿ ಖಾದ್ಯ ತಯಾರಿಸುತ್ತಿದ್ದಾರೆೆ. ಬರುವ ಭಕ್ತರೆಲ್ಲಾ ಕುಳಿತು ಊಟ ಮಾಡಲು ಅನುಕೂಲವಾಗುವಂತೆ ಟೇಬಲ್ ವ್ಯವಸ್ಥೆ ಮಾಡಲಾಗಿದೆ.ಉಪ್ಪಿನಕಾಯಿ, ಕೋಸಂಬರಿ, ಪಾಯಸ, ಬೂಂದಿ, ಚಿತ್ರಾನ್ನ, ಮಜ್ಜಿಗೆ ಅನ್ನ, ಅನ್ನ ಸಾಂಬರ್, ಕೇಸರಿ ಬಾತ್, ಖಾರಬಾತ್, ಖಾರ ಬೂಂದಿ ಸೇರಿ ವಿಶೇಷ ಪದಾರ್ಥಗಳು ದಾಸೋಹದಲ್ಲಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net