ಜೀವನದಲ್ಲಿ ಸಂಸ್ಕಾರಗಳ ಪಾತ್ರ ಹಿರಿದು,  ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ ಅಭಿಮತ

IMG_20250713_204020_555.jpg
Published on

ಹುಬ್ಬಳ್ಳಿ: ಯಾವುದೇ ವಸ್ತು, ಮನುಷ್ಯನ ಜೀವನವೇ ಆಗಲಿ ಅವುಗಳಿಗೆ ಸಂಸ್ಕಾರ ನೀಡಿದಾಗ ಮಾತ್ರ ಅವುಗಳ ಮೌಲ್ಯ ವೃದ್ಧಿಯಾಗುತ್ತದೆ. ಜೀವನದಲ್ಲಿ ಸಂಸ್ಕಾರಕ್ಕೆ ಬಹು ಮಹತ್ವವಿದೆ. ಕುಂಬಾರನು ಮಣ್ಣಿಗೆ ಸಂಸ್ಕಾರ ನೀಡಿದಾಗ ಅದು ಮಡಕೆಯಾಗುತ್ತದೆ, ಹಾಗೆಯೇ ಮನುಷ್ಯ ಜೀವನ ಸಂಸ್ಕಾರದಿಂದ ಮಾತ್ರ ಶ್ರೇಷ್ಠವಾಗುತ್ತದೆ ಎಂದು ಶ್ರೀ ಕ್ಷೇತ್ರ ಶ್ರವಣಬೆಳಗೋಳದ ನೂತನ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಇಲ್ಲಿಯ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಸಂಸ್ಕಾರಗಳು ಮನುಷ್ಯನ ವ್ಯಕ್ತಿತ್ವವನ್ನು ನಡವಳಿಕೆಗಳನ್ನು ಸುಧಾರಿಸಿ ಕುಟುಂಬ, ಸಮಾಜಗಳಲ್ಲಿ ಶಾಂತಿ ಸಾಮರಸ್ಯಕ್ಕೆ ದಾರಿ ಮಾಡಿಕೊಡುತ್ತವೆ. ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ನೀಡುವ ಪ್ರಕ್ರಿಯೆ ನಿರಂತರ ಜಾರಿಯಲ್ಲಿರಬೇಕು ಎಂದರು.

ಪುರಪ್ರವೇಶ: ಭಾನುವಾರ ಬೆಳಗ್ಗೆ ಮಹಾನಗರಕ್ಕೆ ಮಂಗಲ ಪುರಪ್ರವೇಶ ಮಾಡಿದ ಭಟ್ಟಾರಕರಿಗೆ ಹುಬ್ಬಳ್ಳಿ ದಿಗಂಬರ ಜೈನ ಸಮಾಜದ ವತಿಯಿಂದ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿ ಅದ್ದೂರಿ ಸ್ವಾಗತ ನೀಡಲಾಯಿತು.

ಮಂಗಲ ವಾದ್ಯ ಮೊಳಗುತ್ತಿದ್ದಂತೆ ಮಂಗಲ ಕಳಸ ಹೊತ್ತ ಮಹಿಳೆಯರು ಸ್ವಾಮೀಜಿಯವರಿಗೆ ಸ್ವಾಗತ ಕೋರಿದರು. ಜೈನ ಸಮಾಜದ ಪದಾಧಿಕಾರಿಗಳು ಪಾದಪೂಜೆ ನೆರವೇರಿಸಿ ಪುಷ್ಪವೃಷ್ಟಿ ಮಾಡಿದರು.
ಪುಷ್ಪಾಲಂಕೃತ ವಾಹನದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಿತು. ನಂತರ ಶಾಂತಿನಾಥ ಬಸದಿಯಲ್ಲಿ ವಿಶೇಷ ಪಂಚಾಮೃತ ಅಭಿಷೇಕ ನೆರವೇರಿತು.

ನಂತರ ನಡೆದ ಧರ್ಮಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪಾಲ್ಗೊಂಡು ಶ್ರೀಗಳಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು "ಪುಣ್ಯ ಪುರುಷರ ಪಾದಸ್ಪರ್ಶದಿಂದ ಪ್ರದೇಶವು ಪವಿತ್ರವಾಗುತ್ತದೆ. ಮಳೆ ಬೆಳೆಗಳು ಚೆನ್ನಾಗಿ ಆಗುತ್ತವೆ. ಶ್ರವಣಬೆಳಗೋಳ ಜೈನ ಪೀಠವು ಕನ್ನಡ ನಾಡಿಗೆ ಕನ್ನಡ ಸಾಹಿತ್ಯಕ್ಕೆ ಜನಕಲ್ಯಾಣಕ್ಕೆ ನೀಡಿರುವ ಕೊಡುಗೆ ಬಲು ದೊಡ್ಡದು ಎಂದರು.

ಶ್ರವಣಬೆಳಗೋಳದ ಪೂರ್ವ ಪೀಠಾಧಿಪತಿ ಚಾರುಕೀರ್ತಿಗಳು ಸಮಾಜಕ್ಕೆ ಸಲ್ಲಿಸಿದ ಸೇವೆ ಅಜರಾಮರ. ನೂತನ ಪೀಠಾಧಿಪತಿಗಳು ಆ ಪರಂಪರೆಯನ್ನು ಮುಂದುವರೆಸಿದ್ದಾರೆ ಎಂದರು.

ಅಷ್ಟ ದ್ರವ್ಯ ಅಷ್ಟಕ ಸಹಿತ ಪೂಜ್ಯರಿಗೆ ಪಾದಪೂಜೆ ನೆರವೇರಿಸಿ, ಜೈನ ಸಮಾಜದ ವತಿಯಿಂದ ಹಾಗೂ ವಿವಿಧ ಜೈನ ಸಂಘಟನೆಗಳ ವತಿಯಿಂದ ಗೌರವ ಸನ್ಮಾನ ಸಲ್ಲಿಸಲಾಯಿತು.

ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ಉಪಾಧ್ಯಕ್ಷರಾದ ವಿಮಲ್ ತಾಳಿಕೋಟಿ, ಸುಹಾಸ್ ಜವಳಿ, ಶ್ರೇಣಿಕರಾಜ್ ರಾಜಮಾನೆ, ಖಜಾಂಚಿ ಸಂತೋಷ್ ಮುರಗಿ ಪಾಟೀಲ್, ಶಾಂತಿನಾಥ ಭವನ ಅಧ್ಯಕ್ಷ ಮಹಾವೀರ್ ಗೊಂಗಡಿ ಉಪಸ್ಥಿತರಿದ್ದರು.

ಸುತ್ತಲಿನ ವಿವಿಧ ಗ್ರಾಮಗಳು ಹಾಗೂ ಬೇರೆ ಬೇರೆ ಜಿಲ್ಲೆಗಳ ನೂರಾರು ಜನರು ಭಾಗವಹಿಸಿದ್ದರು.
ಮಹಿಳಾ ಸಮಾಜದ ಸದಸ್ಯರು ಪ್ರಾರ್ಥನೆ ಹಾಗೂ ಸ್ವಾಗತ ಗೀತೆ ಹಾಡಿದರು. ಶಾಂತಿನಾಥ್ ಹೋತಪೇಟಿ ಅಭಿನಂದನಾ ನುಡಿ ಹೇಳಿದರು. ಆರ್.ಟಿ. ತವನಪ್ಪನವರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net