

ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮೀಟಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಶ್ರೀಮಠದಲ್ಲಿ ಸೆ. 15ರವರೆಗೆ ಹಮ್ಮಿಕೊಂಡಿರುವ ಕೋಟಿ ಜಪಯಜ್ಞ ಕಾರ್ಯಕ್ರಮದ ಉದ್ಘಾಟನೆ ಬುಧವಾರ ನೆರವೇರಿತು.
ಉದ್ಘಾಟಿಸಿ ಮಾತನಾಡಿದ ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ. ಶಾಂತಿ, ಮನುಷ್ಯನ ದುರಾಸೆಯಿಂದ ಪ್ರಕೃತಿ ವಿನಾಶವಾಗಿದೆ. ನಿಸರ್ಗವನ್ನು ಗೌರವಿಸಬೇಕು. ಪಂಚಾಕ್ಷರಿ ಮಂತ್ರದ ಜಪ ಹಾಗೂ ಗುರುಗಳ ಮಾರ್ಗದರ್ಶನದಿಂದ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದರು.
ಆಶೀರ್ವಚನ ನೀಡಿದ ಕಾಡರಕೊಪ್ಪ ಪೂರ್ಣಾನಂದ ಆಶ್ರಮದ ನ್ಯಾಯ ವೇದಾಂತಾಚಾರ್ಯ ಸದ್ಗುರು ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿ, ಮಾನವನಷ್ಟು ದೊಡ್ಡ ಸ್ವಾರ್ಥಿ ಜೀವಿ ಮತ್ತೊಂದಿಲ್ಲ. ಸ್ವಾರ್ಥದಿಂದ ಪಾಪ ಹುಟ್ಟಿಕೊಳ್ಳುತ್ತದೆ. ಪ್ರತಿಯೊಬ್ಬರೂ ಸ್ವಾರ್ಥ ಬಯಸದೇ ಲೋಕಕಲ್ಯಾಣದಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚಿಕ್ಕನಂದಿ ಹಾಗೂ ಮಹಾಲಿಂಗಪೂರ ಶ್ರೀ ಸಿದ್ಧಾರೂಢ ದರ್ಶನಪೀಠದ ಪೀಠಾಧ್ಯಕ್ಷ ಶ್ರೀ ಸಹಜಾನಂದ ಸ್ವಾಮೀಜಿ, ಗೋಕಾಕ ಶ್ರೀ ಶಾಮಾನಂದ ಆಶ್ರಮದ ಶ್ರೀ ಅತ್ಯಾನಂದ ಸ್ವಾಮೀಜಿ ಹಾಗೂ ಹರಳಕಟ್ಟಿ ಶಿವಾನಂದ ಮಠದ ಶ್ರೀ ನಿಜಗುಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಜಮಖಂಡಿಯ ಶ್ರೀ ಸಹಜಾನಂದ ಸ್ವಾಮೀಜಿ, ಅಣ್ಣಿಗೇರಿ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ನೇತೃತ್ವವನ್ನು ಹಾಗೂ ಮತ್ತಿಕಟ್ಟಿಯ ಶ್ರೀ ಶಿವಬಸವ ಸ್ವಾಮೀಜಿ, ಜಮಖಂಡಿಯ ಶ್ರೀ ಕೃಷ್ಣಾನಂದ ಅವಧೂತರು ಬೆಳಹೋಳದ ಶ್ರೀ ಪರಿಪೂರ್ಣಾನಂದ ಸ್ವಾಮೀಜಿ, ರನ್ನಬೆಳಗಲಿಯ ಶ್ರೀ ಸದಾಶಿವ ಗುರೂಜಿ ಸಮ್ಮುಖ ಸ್ಥಾನವನ್ನು ವಹಿಸಿದ್ದರು. ಶ್ರೀಮಠದ ಟ್ರಸ್ಟ್ ಕಮೀಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. 360 ದಂಪತಿ ಜಪಯಜ್ಞದಲ್ಲಿ ಪಾಲ್ಗೊಂಡಿದ್ದರು. ಕಮೀಟಿ ವೈಸ್ ಚೇರ್ಮನ್ ಉದಯಕುಮಾರ ನಾಯ್ಕ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಮಂಜುನಾಥ ಮುನವಳ್ಳಿ, ವಿ.ವಿ. ಮಲ್ಲಾಪೂರ, ಡಾ. ಗೋವಿಂದ ಮಣ್ಣೂರ, ಬಾಳು ಮಗಜಿಕೊಂಡಿ, ವಿನಾಯಕ ಘೋಡಕೆ, ಚನ್ನವೀರ ಮುಂಗರವಾಡಿ, ಗೀತಾ ಕಲಬುರ್ಗಿ ಹಾಗೂ ಇತರರು ಉಪಸ್ಥಿತರಿದ್ದರು. ಕೋಟಿ ಜಪಯಜ್ಞ ಕಾರ್ಯಕ್ರಮದ ಅಧ್ಯಕ್ಷ ಶಾಮಾನಂದ ಪೂಜೇರಿ ಸ್ವಾಗತಿಸಿದರು. ಮಾಜಿ ಧರ್ಮದರ್ಶಿ ಎಸ್.ಐ. ಕೋಳಕೂರ ನಿರೂಪಿಸಿದರು.