

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀ ಉಳವಿ ಬಸವೇಶ್ವರ ಧರ್ಮ -ಫ೦ಡ ಸಂಸ್ಥೆ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ನಗರದ ಮಾಳಮಡ್ಡಿಯ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಜು. 25ರಿಂದ ಆ. 24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಡಾ. ಎಸ್.ಆರ್. ರಾಮನಗೌಡರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರ ಅವರು, ಉಪ್ಪಿನಬೆಟಗೇರಿ ಮೂರುಸಾವಿರ ಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಅವರಿಂದ ಪ್ರತಿನಿತ್ಯ ಸಂಜೆ 6.30ರಿಂದ ಭೀಮಕವಿ ವಿರಚಿತ `ಬಸವ ಪುರಾಣ' ಕುರಿತು ಪ್ರವಚನ ನಡೆಯಲಿದೆ. 20ರಂದು ಸಂಜೆ 5.30ಕ್ಕೆ ಪ್ರವಚನ ಸಮಾರಂಭದ ಉದ್ಘಾಟನೆಯನ್ನು ದೇವರಹುಬ್ಬಳ್ಳಿ ಸಿದ್ಧಾಶ್ರಮದ ಶ್ರೀ ಸಿದ್ಧಶಿವಯೋಗಿ ಸ್ವಾಮೀಜಿ ನೆರವೇರಿಸುವರು ಎಂದರು.
ಆ. 18ರಂದು ಬೆಳಗ್ಗೆ 7ಕ್ಕೆ ಷಟಸ್ಥಲ ಚಕ್ರವರ್ತಿ ಶ್ರೀ ಚನ್ನಬಸವಣ್ಣನ ಹಾಗೂ ಶ್ರೀ ವೀರಭದ್ರ ದೇವರಿಗೆ ಮಹಾರುದ್ರಾಭಿಷೇಕ ನೆರವೇರಲಿದೆ. ಸಂಜೆ 4ಕ್ಕೆ ಶ್ರೀ ಉಳವಿ ಚನ್ನಬಸವೇಶ್ವರರ 23ನೇ ಮಹಾರಥೋತ್ಸವಕ್ಕೆ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡುವರು. 24ರಂದು ಬೆಳಗ್ಗೆ 10ಕ್ಕೆ ಶ್ರಾವಣ ಮಾಸದ ಪುರಾಣ ಮಂಗಲ ನಡೆಯಲಿದೆ. ಮುನವಳ್ಳಿ ಸೋಮಶೇಖರ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದರು.