

ಬೆಳಗಾವಿ: ಶ್ರಾವಣ ಮಾಸ ಆರಂಭಗೊಂಡಾಗಿನಿಂದಲೂ ಹೂವಿನ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಪಂಚಮಿ ಸಡಗರ ಮುಗಿದು ವರಮಹಾಲಕ್ಷ್ಮೀ ಹಬ್ಬ ಕಳೆಗಟ್ಟಿದೆ. ಮಳೆ ಇಲ್ಲದೆ ಹೂವಿನ ಇಳುವರಿ ಕುಸಿದು ಸಹಜವಾಗಿ ಹೂವಿನ ದರ ದುಪ್ಪಟ್ಟಾಗಿದ್ದು, ಶ್ರಾವಣದ ವಿಶೇಷ ಪೂಜೆಗೆ ಹೂವು ಗಗನ ಕುಸುಮವಾಗಿದೆ.
ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇದ್ದರೂ ಬೆಲೆ ಮತ್ತಷ್ಟು ಹೆಚ್ಚಬಹುದೆಂಬ ಆತಂಕದಿಂದ ಮುಂಚಿತವಾಗಿಯೇ ಜನರು ಹೂವುಗಳನ್ನು ಖರೀದಿಸುತ್ತಿದ್ದಾರೆ. ತಿಂಗಳಪೂರ್ತಿ ಆರಾಧ್ಯ ದೇವರ ಪೂಜೆ ಮಾಡಿ ಪ್ರಾರ್ಥಿಸುವ ಭಕ್ತರು ಹೂವಿನ ಬೆಲೆ ಕೇಳಿ ಮುಖ ಮುದುಡಿಸುವಂತಾಗಿದೆ. ದರ ಹೆಚ್ಚಳ ಹೂ ಬೆಳೆಗಾರರಲ್ಲಿ ಸಂತಸ ತಂದರೆ, ಗ್ರಾಹಕರ ಜೇಬು ಸುಡುತ್ತಿದೆ.
ಸೇವಂತಿ, ಗುಲಾಬಿ, ಚೆಂಡುಹೂವು, ಮಲ್ಲಿಗೆ ಹೂವು, ಬಾಳೆ ಹಣ್ಣು, ಸೇಬು, ಸೀತಾಫಲ, ಮೋಸಂಬಿ ಹಣ್ಣು ಸೇರಿ ಇನ್ನಿತರ ಪೂಜಾ ಸಾಮಗ್ರಿಗಳ ದರವೂ ತೀವ್ರ ಏರಿಕೆಯಾಗಿದೆ. ಬೆಳಗಾವಿಯ ಹೂವಿನ ಮಾರುಕಟ್ಟೆಯಲ್ಲಿ ಬುಧವಾರ ಸೇವಂತಿಗೆ ಹೂವು ಒಂದು ಕೆಜಿಗೆ 200ರಿಂದ 220 ರೂ.ವರೆಗೆ ಮಾರಾಟವಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಬಾಳೆ ಹಣ್ಣಿನ ಬೆಲೆಯೂ ಡಜನ್‌ಗೆ 50-70 ರೂಪಾಯಿಗೆ ಏರಿಕೆಯಾಗಿದ್ದು, ಹಬ್ಬದ ವೇಳೆಗೆ ಮತ್ತಷ್ಟು ದುಬಾರಿಯಾಗಲಿದೆ ಎನ್ನಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು, ಈ ಬಾರಿ ಮುಂಗಾರು ಮಳೆಯಾಗಲಿಲ್ಲ. ತಡವಾಗಿ ಶುರುವಾದ ಮಳೆ ಎರಡು ವಾರಕ್ಕೂ ಅಧಿಕ ದಿನ ಸುರಿದ ಕಾರಣ ಬೆಳೆ ಹಾಳಾಗಿದೆ. ಅಲ್ಪ ಪ್ರಮಾಣದಲ್ಲಿ ಬೆಳೆ ಬದುಕುಳಿದಿದೆ. ಹೀಗಾಗಿ, ಆವಕ ಪ್ರಮಾಣ ಕುಸಿದಿದೆ ತಿಳಿಸಿದ್ದಾರೆ.
ಬುಧವಾರ ಬೆಳಗಾವಿಯ ಪುಷ್ಪ ಹರಾಜು ಮಾರುಕಟ್ಟೆಗೆ ಕಳೆದ ಬಾರಿಯ ಅರ್ಧದಷ್ಟೂ ಹೂವುಗಳ ಆವಕವಾಗಿರಲಿಲ್ಲ. ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಯಿಂದ ಸೇವಂತಿ (ಬೇಬಿ ಡಾಲ್) 1 ಟನ್ ಆವಕವಾಗಿತ್ತು. ಬಿಳಿ ಸೇವಂತಿ 5 ಕ್ವಿಂಟಾಲ್, ಚಂಡು ಹೂವು 7 ಟನ್, ಬೆಂಗಳೂರಿನ ಗುಲಾಬಿ (ಬಟನ್ ರೋಸ್) 10-11 ಟನ್, ಗಲಾಟೆ ಹಾಗೂ ಹಾಸ್ಟರ್ ಹೂವು ತಲಾ ನೂರು ಕೆಜಿ ಮತ್ತು ಸುಗಂಧಿ ಹೂವು ಕೇವಲ 50 ಕೆಜಿಯಷ್ಟೇ ಆವಕವಾಗಿತ್ತು.
ಪ್ರತಿ ಕೆಜಿಗೆ ಹಳದಿ ಸೇವಂತಿ 100-150 ರೂ., ಚೆಂಡುಹೂವು 10-20 ರೂ., ಗುಲಾಬಿ 200-220 ರೂ., ಗಲಾಟೆ ಹೂವು 50-60 ರೂ., ಹಾಸ್ಟರ್ ಹೂವು 120-150 ರೂ., ಸುಗಂಧಿ ಹೂವು 100-120 ರೂ.ನಂತೆ ಮಾರಾಟವಾಗಿದೆ. ಹೂವಿನ ದರ ಕೇಳಿ ಗ್ರಾಹಕರು ಒಂದು ಕೆಜಿ ಖರೀದಿಸುವ ಬದಲು ಅರ್ಧ ಕೆ.ಜಿ. ಖರೀದಿಸುತ್ತಿದ್ದಾರೆಂದು ಹೂವಿನ ವ್ಯಾಪಾರಿ ಆರ್.ಡಿ.ದೊಡ್ಡಮನಿ ತಿಳಿಸಿದರು.
ಕಳೆದೆರಡು ತಿಂಗಳಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ಈಗ ಬೆಲೆ ಕುಸಿತದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈರುಳ್ಳಿ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಕೆ.ಜಿ ಈರುಳ್ಳಿ 30-35ರೂ., ಟೊಮ್ಯಾಟೊ ಕೆ.ಜಿ.ಗೆ 30.ರೂ. ಇದೆ. ಬಹುತೇಕ ತರಕಾರಿಗಳ ಬೆಲೆ ನಿಯಂತ್ರಣದಲ್ಲಿವೆ. ಮಂಗಳವಾರ ಮತ್ತು ಬುಧವಾರ ಹಣ್ಣಿನ ಮಾರುಕಟ್ಟೆಯಲ್ಲಿ ಕೆ.ಜಿ ಪಪ್ಪಾಯಿ 30ರಿಂದ 35 ರೂ. ಪಚ್ಚಬಾಳೆ 30 ರಿಂದ 45ರೂ., ಸೇಬು ಕೆ.ಜಿ. 120 ರಿಂದ 250 ರೂ., ಚಿಕ್ಕು ಹಣ್ಣು 100ರಿಂದ 140 ರೂ., ಪೈನಾಪಲ್ 80ರಿಂದ 150ಕ್ಕೆ ಏರಿಕೆ ಕಂಡಿದೆ. ಹಬ್ಬಕ್ಕೆ ಮುಂಚಿತವಾಗಿಯೇ ನಗರದಲ್ಲಿ ಪೈನಾಪಲ್, ಸಪೋಟಾ ಹಣ್ಣುಗಳ ಸಂಗ್ರಹ ಜೋರಾಗಿತ್ತು. ಬುಧವಾರ ಸಾರ್ವಜನಿಕರು ವಿವಿಧೆಡೆ ಹಣ್ಣು, ಹೂವು ಖರೀದಿಯಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಕಂಡುಬಂದಿತು. ಮಂಗಳವಾರ-ಬುಧವಾರದ ಬೆಲೆಗೂ ವ್ಯತ್ಯಾಸವಾಗಿದ್ದು, ಶುಕ್ರವಾರದವರೆಗೂ ಏರಿಕೆ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ.
ಶ್ರಾವಣ ಮಾಸದಲ್ಲಿ ಬೇಡಿಕೆ ಹೆಚ್ಚಬಹುದು ಎಂದು ಹೂವು ಬೆಳೆಗಾರರು ಕಾಯುತ್ತಿರುತ್ತಾರೆ. ನಮಗೆ ಸ್ವಲ್ಪ ದರ ಹೆಚ್ಚೆನಿಸಿದರೂ ಹಬ್ಬಕ್ಕೆ ಹೂವು ಬೇಕೇ ಬೇಕು. ನಾಳೆ ದರ ಇನ್ನಷ್ಟು ಹೆಚ್ಚಾಗಬಹುದು. ಹೀಗಾಗಿ ಇಂದೇ ಖರೀದಿಸುತ್ತಿದ್ದೇವೆ.| ಶೋಭಾ ಕದಂ | ಮೋಹನ್ ಪಾಟೀಲ, ಬೆಳಗಾವಿ ನಿವಾಸಿಗಳು
| ರವಿ ಗೋಸಾವಿ ಬೆಳಗಾವಿ