ಶ್ರವಣಬೆಳಗೊಳ: ಇಲ್ಲಿನ ಜೈನ ಮಠದಲ್ಲಿ 22ನೇ ತೀರ್ಥಂಕರ ಭಗವಾನ್ ಶ್ರೀ ನೇಮಿನಾಥರ ವಾರ್ಷಿಕ ಮಹಾ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಶ್ರೀ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಬೆಳಗ್ಗೆಯಿಂದಲೆ ಭಂಡಾರಿ ಬಸದಿಯಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ನಂತರ ಭಗವಾನ್ ನೇಮಿನಾಥ ತೀರ್ಥಂಕರರ ಮೂರ್ತಿಯನ್ನು ಮೆರವಣಿಗೆ ಮೂಲಕ ಮಹಾ ರಥದಲ್ಲಿ ಪ್ರತಿಷ್ಠಾಪಿಸಿ ವಾರ್ಷಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜೈನ ಮಠದ ಮುಂಭಾಗದಲ್ಲಿ ಅಲಂಕರಿಸಿದ ಮಹಾರಥದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ನಂತರ ಶ್ರೀಗಳು ರಥಕ್ಕೆ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು, ಫಲ- ಪುಷ್ಪಗಳನ್ನು ಸಮರ್ಪಿಸಿ ಚಾಲನೆ ನೀಡಿದರು. ರಥದಲ್ಲಿದ್ದ ತೀರ್ಥಂಕರರ ಮೂರ್ತಿಗೆ ಹೂವು, ಹಣ್ಣು, ದವನದಿಂದ ಭಕ್ತರು ಪೂಜೆ ನೆರವೇರಿಸಿದರು. ರಥದ ಕಳಸಕ್ಕೆ ಬಾಳೆಹಣ್ಣು- ದವನ ಎಸೆದು, ಜಯ ಘೋಷ ಮಾಡುತ್ತ ರಥಯಾತ್ರೆಯಲ್ಲಿ ಸಾಗಿದರು. ವಿವಿಧ ಮಂಗಳವಾದ್ಯಗಳು, ಕಲಾತಂಡಗಳು ಮೆರಗು ನೀಡಿದವು. ಈ ಸಂದರ್ಭದಲ್ಲಿ ಆಚಾರ್ಯ ಶ್ರೀ ಪ್ರಸನ್ನ ಸಾಗರ ಮಹರಾಜ್, ಸಂಘಸ್ಥ ತ್ಯಾಗಿಗಳು, ಮಾತಾಜಿಯವರು, ಹೊಂಬುಜ ಜೈನ ಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಮೈಸೂರಿನ ಕನಕಗಿರಿ ಜೈನ ಮಠದ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಆರತಿಪುರ ಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಸಿ.ಎನ್.ಬಾಲಕೃಷ್ಣ ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.